"ಬಂಗಾರಪ್ಪನವರ ನಾಲಿಗೆ ಉದ್ದವಾಗುತ್ತಿದೆ. ಕಾಂಗ್ರೆಸ್ಸಿಗರು ಅವರ ನಾಲಗೆಯನ್ನು ಕತ್ತರಿಸದೇ ಇದ್ದಲ್ಲಿ, ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರೇ ಅವರ ನಾಲಗೆಯನ್ನು ಕತ್ತರಿಸುವುದರ ಜೊತೆಗೆ ಶಾಶ್ವತವಾಗಿ ಮನೆಯಲ್ಲಿಯೇ ಉಳಿಯುವಂತೆ ಮಾಡುತ್ತಾರೆ" ಎಂದು ಇಂಧನ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಬಂಗಾರಪ್ಪ ಅವರು ಮಠಮಾನ್ಯಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಪ್ರತಿಕ್ರಿಯಿಸುತ್ತಾ, ಸರ್ಕಾರಕ್ಕೆ ಎಲ್ಲರಿಗೂ ಶಿಕ್ಷಣವನ್ನು ಹಾಗೂ ಸೇವಾಕಾರ್ಯಗಳನ್ನು ಮಾಡಲಾಗುತ್ತಿಲ್ಲ. ಈ ಎಲ್ಲಾ ಕಾರ್ಯಗಳನ್ನು ಮಠಮಾನ್ಯಗಳು ಮಾಡುತ್ತಿರುವುದರಿಂದ ಅವುಗಳಿಗೆ ಧನಸಹಾಯ ಮಾಡಲಾಗುತ್ತಿದೆ ಎಂದು ಸರ್ಕಾರದ ಕಾರ್ಯವನ್ನು ಸಮರ್ಥಿಸಿಕೊಂಡರು.
"ಬಂಗಾರಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರುಗಳು ಜಾತಿ ಜಾತಿಗೆ ಬೆಂಕಿ ಹಚ್ಚುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ವಿಷದ ಬೀಜ ಬಿತ್ತಿ ರಾಜಕೀಯ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನ ಅವರದ್ದು" ಎಂದು ಆರೋಪಿಸಿದರು.
"ಬಂಗಾರಪ್ಪನವರು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಯಾವುದೇ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮಾಡದೇ ತಾನೊಬ್ಬ ದಲಿತರ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಬೇರೆ ಜಾತಿಯ ಅಭಿವೃದ್ಧಿ ಇರಲಿ ತಮ್ಮ ಜಾತಿಗೇ ಏನನ್ನೂ ಮಾಡದ ಹೇಡಿ ಬಂಗಾರಪ್ಪ" ಎಂದು ಜರೆದರು.
|