ಜೆಡಿಎಸ್ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿರುವ ತೃತೀಯ ರಂಗದ ಸಮಾವೇಶಕ್ಕೆ ಅಗತ್ಯವಿರುವಷ್ಟು ಬಸ್‌ಗಳನ್ನು ಒದಗಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಹಿಂದೇಟು ಹಾಕಿದೆ.
ತೃತೀಯ ರಂಗದ ಮೊದಲ ಸಮಾವೇಶವಾಗಿರುವ ಇದನ್ನು ಅತ್ಯಂತ ಯಶಸ್ವಿಯಾಗಿ ನಡೆಸಲು ಜೆಡಿಎಸ್ ಉತ್ಸುಕವಾಗಿದೆ. ಕನಿಷ್ಠ 4ರಿಂದ 5 ಲಕ್ಷ ಜನರನ್ನು ಸೇರಿಸಬೇಕು ಎಂಬುದು ಜೆಡಿಎಸ್ ಉದ್ದೇಶ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಭರದಿಂದಲೇ ನಡೆಸಿದೆ. ವಿವಿಧ ಪಕ್ಷಗಳ ರಾಷ್ಟ್ರೀಯ ಮುಖಂಡರನ್ನು ಜೆಡಿಎಸ್ ಆಹ್ವಾನಿಸಿದ್ದು, ಸಮಾವೇಶಕ್ಕಾಗಿ ದಾಬಸ್‌ಪೇಟೆಯ ಕೈಗಾರಿಕಾ ಪ್ರದೇಶ ಸಹ ಸಜ್ಜಾಗಿದೆ.
ಸಮಾವೇಶಕ್ಕೆ ಒಟ್ಟಾರೆ 3500 ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿಯ 1000 ಬಸ್‌ಗಳು ಬೇಕೆಂದು ಮನವಿ ಮಾಡಲಾಗಿತ್ತು ಮತ್ತು ಇದಕ್ಕೆ ಸಾರಿಗೆ ಸಂಸ್ಥೆ ಮೊದಲಿಗೆ ಒಪ್ಪಿಗೆ ನೀಡಿತ್ತು. ಆದರೆ ಈಗ ರಾಗ ಬದಲಿಸಿದ ಸಾರಿಗೆ ಸಂಸ್ಥೆ ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಸೇರಿ 1750 ಬಸ್‌ಗಳನ್ನು ಮಾತ್ರ ಒದಗಿಸಲು ಸಾಧ್ಯ ಎಂದು ಹೇಳಿದೆ.
ಸಮಾವೇಶಕ್ಕೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕೊನೆಯ ಹಂತದಲ್ಲಿ ವಾಹನಗಳನ್ನು ಎಲ್ಲಿಂದ ಪಡೆಯುವುದು ಎಂಬ ಚಿಂತೆ ಜೆಡಿಎಸ್ ಮುಖಂಡರನ್ನು ಕಾಡುತ್ತಿದೆ. |