ಪುನರ್ಮಿಲನದ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಂಡಿದ್ದ ಬಿಜೆಪಿ ಅದರಂತೆ ನಡೆದುಕೊಳ್ಳದ ಹಿನ್ನಲೆಯಲ್ಲಿ ಸ್ವಾಭಿಮಾನಿ ವೇದಿಕೆಯು ಉಡುಪಿ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದೆ ಎಂದು ವೇದಿಕೆಯ ಗೌರವಾಧ್ಯಕ್ಷ ಕೆ. ರಾಮ್ ಭಟ್ ತಿಳಿಸಿದ್ದಾರೆ.
ವೇದಿಕೆ ತನ್ನ ನಿರ್ಧಾರವನ್ನು ಪ್ರಕಟಿಸುವುದರೊಂದಿಗೆ ಬಿಜೆಪಿ ವಲಯದಲ್ಲಿ ತಲ್ಲಣ ಕಾಣಿಸಿಕೊಂಡಿದೆ. ಇತ್ತೀಚೆಗಷ್ಟೇ ಆರೆಸ್ಸೆಸ್ ಮಧ್ಯಸ್ತಿಕೆ ವಹಿಸಿ ಸ್ವಾಭಿಮಾನಿ ವೇದಿಕೆಯನ್ನು ಬಿಜೆಪಿ ಜತೆ ವಿಲೀನಗೊಳಿಸಿತ್ತು. ಬಿಜೆಪಿಯ ಪ್ರಮುಖ ಕ್ಷೇತ್ರಗಳೆಂದೇ ಹೇಳಲಾಗುವ ಮಂಗಳೂರು ಮತ್ತು ಉಡುಪಿಯಲ್ಲಿ ವೇದಿಕೆ ಸ್ಪರ್ಧಿಸಲಿದ್ದು, ಇದರಿಂದ ಬಿಜೆಪಿಗೆ ಹಿನ್ನಡೆ ಖಚಿತ ಎಂದು ಅಭಿಪ್ರಾಯಪಡಲಾಗುತ್ತಿದೆ.
ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸ್ವತಃ ರಾಮ್ ಭಟ್ ಸ್ಪರ್ಧಿಸಲಿದ್ದಾರೆ; ಉಡುಪಿ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿಲ್ಲ ಎಂದು ಸ್ವಾಭಿಮಾನಿ ವೇದಿಕೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಶಕುಂತಲಾ ಶೆಟ್ಟಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು 25 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದ್ದರು. ಬಿಜೆಪಿ ರಾಜಾಧ್ಯಕ್ಷ ಡಿ.ವಿ. ಸದಾನಂದ ಗೌಡರ ರಾಜಕೀಯ ಗುರು ಕೆ. ರಾಮ್ ಭಟ್ ಆ ಸಂದರ್ಭದಲ್ಲಿ ಸ್ವಾಭಿಮಾನಿ ವೇದಿಕೆಯ ಮುಂಚೂಣಿ ನಾಯಕತ್ವ ವಹಿಸಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ಮತ್ತು ಸ್ವಾಭಿಮಾನಿ ವೇದಿಕೆ ನಡುವೆ ಮುಸುಕಿನ ಗುದ್ದಾಟ-ಮಾತುಕತೆ ಮುಂದುವರಿದಿತ್ತು. ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವೇದಿಕೆ ಜತೆ ಬಿಜೆಪಿ ಒಪ್ಪಂದ ಮಾಡಿಕೊಂಡು ಪರಿಸ್ಥಿತಿಯನ್ನು ತಣ್ಣಗೆ ಮಾಡಿಕೊಂಡಿತ್ತು.
ಆದರೆ ತಾವು ವಿಧಿಸಿದ ಯಾವುದೇ ಷರತ್ತುಗಳಿಗೆ ಬಿಜೆಪಿ ಸ್ಪಂದಿಸಿಲ್ಲ ಎನ್ನುವುದು ಸ್ವಾಭಿಮಾನಿ ವೇದಿಕೆ ದೂರು. ವೇದಿಕೆ ಸೂಚಿಸಿದ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದರೆ ತಾವು ಸ್ಪರ್ಧೆಯಿಂದ ಹಿಂಸರಿಯಲು ಈಗಲೂ ಸಿದ್ಧ. ಪಕ್ಷದಿಂದ ಉಚ್ಛಾಟಿಸಲಾಗಿದವರನ್ನು ವಾಪಸು ಕರೆಸಿಕೊಳ್ಳುವ ಕನಿಷ್ಠ ಸೌಜನ್ಯವನ್ನೂ ಬಿಜೆಪಿ ಈ ವರೆಗೆ ತೋರಿಸಿಲ್ಲ. ಬಿಜೆಪಿಯಲ್ಲಿನ ಆಂತರಿಕ ಪ್ರಜಾಪ್ರಭುತ್ವದ ಕೊರತೆ ಮತ್ತು ಆರೆಸ್ಸೆಸ್ ನಿರ್ಧಾರಗಳನ್ನು ವಿರೋಧಿಸಿ ನಾವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು ಎಂದು ಸ್ವಾಭಿಮಾನಿ ವೇದಿಕೆಯ ನಾಯಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ವಾಭಿಮಾನಿ ವೇದಿಕೆ ಸೂಚಿಸಿದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮಾತ್ರ ತಮ್ಮ ಷರತ್ತುಗಳನ್ನು ಕೈ ಬಿಡಲು ಸಿದ್ಧ ಎಂದಿರುವ ವೇದಿಕೆ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಕಾಡುವ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಮಂಗಳೂರು ಲೋಕಸಭಾ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು ಹಾಗೂ ಉಡುಪಿಯಿಂದ ಡಿ.ವಿ. ಸದಾನಂದ ಗೌಡರನ್ನು ಬಿಜೆಪಿ ಕಣಕ್ಕಿಳಿಸಲು ನಿರ್ಧರಿಸಿದ್ದು, ವೇದಿಕೆಯ ಒತ್ತಡಕ್ಕೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂದು ಕಾದು ನೋಡಬೇಕಾಗಿದೆ.
|