ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ತೃತೀಯರಂಗ ಸಮಾವೇಶ: ಬಸ್ಸು ರಾಜಕೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೃತೀಯರಂಗ ಸಮಾವೇಶ: ಬಸ್ಸು ರಾಜಕೀಯ
NRB
ತೃತೀಯ ರಂಗದ ಸಮಾವೇಶದಿಂದ ರಾಜ್ಯದಲ್ಲಿ ಜೆಡಿಎಸ್ ಬೆಳವಣಿಗೆಯಾಗುತ್ತದೆ ಎಂಬುದನ್ನು ಸಹಿಸದೆ ಸಾರಿಗೆ ಸಂಸ್ಥೆ ಬಸ್ಗಳನ್ನು ಒದಗಿಸಲು ಹಿಂದೇಟು ಹಾಕುವ ಮೂಲಕ ಬಿಜೆಪಿ ಸರ್ಕಾರ ಸಣ್ಣತನ ತೋರಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಬೆಳೆದರೆ ಅದು ಬಿಜೆಪಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಸಣ್ಣತನದ ರಾಜಕೀಯವನ್ನು ಮುಖ್ಯಮಂತ್ರಿ ಹಾಗೂ ಸಾರಿಗೆ ಮಂತ್ರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ತೃತೀಯ ರಂಗದ ಸಮಾವೇಶಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರಿಗೆ ಸಂಸ್ಥೆಯ ಬಸ್ಗಳು ನೀರೀಕ್ಷೆಯಷ್ಟು ಸಿಗದಿದ್ದ ಮಾತ್ರಕ್ಕೆ ಸಮಾವೇಶ ಯಶಸ್ಸು ಕಾಣಲು ಸಾಧ್ಯವಿಲ್ಲವೆಂದು ಬಿಜೆಪಿ ಭಾವಿಸಿದರೆ ಅದು ಭ್ರಮೆ. ಈ ಸರ್ಕಾರದಿಂದ ಬೇಸತ್ತಿರುವ ಜನತೆ ಸ್ವಯಂ ಪ್ರೇರಣೆಯಿಂದ ಸಮಾವೇಶಕ್ಕೆ ಬಂದು ಯಶಸ್ವಿಗೊಳಿಸಲಿದ್ದಾರೆ ಎಂದರು.

ಬಿಜೆಪಿ ಸೇರಿದಂತೆ ಬೇರೆ ಬೇರೆ ಪಕ್ಷಗಳ ಅನೇಕ ಮುಖಂಡರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದರು. ರಾಜ್ಯದಲ್ಲಿ ಪಕ್ಷ ಬೆಳೆಯಲು ಸಹಕಾರಿಯಾಗುವವರನ್ನು ನೋಡಿ ಸೇರಿಸಿಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ನ ಕೆಲವು ನಾಯಕರ ವಿರೋಧದಿಂದಾಗಿ ಮೈತ್ರಿ ಸಾಧ್ಯವಾಗಿಲ್ಲವೆಂಬುದನ್ನು ಒಪ್ಪಿಕೊಂಡ ಕುಮಾರಸ್ವಾಮಿ, ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳದೇ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದರು.

ಸಾರಿಗೆ ಸಚಿವರ ಸ್ಪಷ್ಟನೆ
ಕುಮಾರಸ್ವಾಮಿಯವರ ಆರೋಪವನ್ನು ಅಲ್ಲಗಳೆದಿರು ಸಾರಿಗೆ ಸಚಿವ ಅಶೋಕ್ ಅವರು ಸಮಾವೇಶಕ್ಕೆ ಬಸ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗದಂತೆ ಎಷ್ಟು ಬಸ್ಸುಗಳನ್ನು ಒದಗಿಸಲು ಸಾಧ್ಯವು ಅಷ್ಟು ಬಸ್ಸುಗಳನ್ನು ಸಾರಿಗೆ ಸಂಸ್ಥೆ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸ್ಥೆಯಲ್ಲಿ ಇರುವ ಒಟ್ಟು ಬಸ್ಸುಗಳ ಸಂಖ್ಯೆ 5000. ಜೆಡಿಎಸ್ 3000 ಬಸ್ಸುಗಳಿಗೆ ಬೇಡಿಕೆ ಇರಿಸಿದೆ. ಅರ್ಧಕ್ಕಿಂತಲೂ ಹೆಚ್ಚು ಬಸ್ಸುಗಳನ್ನು ಒದಗಿಸಿದರೆ ದೈನಂದಿನ ಪ್ರಯಾಣಕ್ಕೆ ಅಡ್ಡಿಯಾಗಲಿದ್ದು ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಲಿದೆ, ಅಲ್ಲದೆ, ಈ ಕುರಿತು ಹೈಕೋರ್ಟ್ ಆದೇಶವೇ ಇದೆ ಎಂದೂ ಹೇಳಿದ್ದಾರೆ. 3000 ಬಸ್ಸುಗಳನ್ನು ನೀಡಲು ಸಾಧ್ಯವಿಲ್ಲವಾದರೂ ಎಷ್ಟು ಸಾಧ್ಯವೋ ಅಷ್ಟು ಬಸ್ಸುಗಳನ್ನು ಒದಗಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಜೆಪಿ ನಡೆಗೆ 'ಸ್ವಾಭಿಮಾನಿ'ಗಳಿಂದ ಅಡೆ-ತಡೆ
ಪೊಲೀಸ್ ವೆಬ್‌ಸೈಟಲ್ಲಿ ಆಚಾರ್ಯ ಬ್ಲಾಗ್‌ಗೆ ನಿರ್ಬಂಧ
ಎಲ್ಲಾ ರೇವ್ ಪಾರ್ಟಿ ಆರೋಪಿಗಳಿಗೆ ಜಾಮೀನು
ತೃತೀಯ ರಂಗದ ಸಮಾವೇಶಕ್ಕೆ ಸಾಕಷ್ಟು ಬಸ್ಸಿಲ್ಲ?
ಬಂಗಾರಪ್ಪ ನಾಲಿಗೆಯನ್ನು ಕತ್ತರಿಸಿ: ಈಶ್ವರಪ್ಪ
ಪಾರ್ಟಿ ಮೇಲೆ ದಾಳಿ: 110 ಅರೆ ನಗ್ನರ ಬಂಧನ