ಸಂಸದ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಈಗ ಅಧಿಕಾರ ಇಲ್ಲದೇ ಇರುವುದರಿಂದ ಬಿಜೆಪಿ ನಾಯಕರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಇಂಧನ ಸಚಿವ ಕೆ.ಎಸ್.ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಾಪುರ ಈಗ ಮೀಸಲು ಕ್ಷೇತ್ರವಾಗಿರುವುದರಿಂದ ಅವರು ಕ್ಷೇತ್ರ ಕಳೆದುಕೊಂಡಿದ್ದಾರೆ. ತಮ್ಮ ಕ್ಷೇತ್ರ ಮೀಸಲುಕ್ಷೇತ್ರವಾದ ತಕ್ಷಣ ಪಕ್ಷದ ನಾಯಕರ ಬಗ್ಗೆ ಹಗುರವಾಗಿ ಟೀಕಿಸುವುದು ಸರಿಯಲ್ಲ, ಅವರು ಪಕ್ಷದಲ್ಲಿಯೇ ಇರುವುದಾಗಿ ಹೇಳುತ್ತಿರುವುದರಿಂದ ಇದು ಬಿಜೆಪಿ ಕಾರ್ಯಕರ್ತರಿಗೂ ಶೋಭೆ ತರಲ್ಲ ಎಂದರು.
ಯತ್ನಾಳ್ ಅವರು ನನಗಿಂತ ದೊಡ್ಡವರು. ಸಂಸದರಾಗಿದ್ದವರು, ಕೇಂದ್ರ ಸಚಿವರೂ ಆಗಿದ್ದರು. ಈ ರೀತಿ ಹಗುರವಾಗಿ ಮಾತನಾಡುವುದು ಅವರ ಘನತೆಗೆಒಪ್ಪುವುದಿಲ್ಲ. ಯತ್ನಾಳ್ ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷದಲ್ಲಿರುತ್ತಿದ್ದರೂ ಮೂಲೆ ಗುಂಪಾಗುತ್ತಿದ್ದರು ಎಂದು ಹೇಳಿದರು.
ಮೂರು ದಿನಗಳಲ್ಲಿ ಉಚ್ಛಾಟನೆ: ಯತ್ನಾಳ್ ಭಿನ್ನಮತ ದಿನೇದಿನೇ ಉಲ್ಬಣಗೊಳ್ಳತ್ತಿದೆ. "ಪಕ್ಷವಿರೋಧಿ ಚಟುವಟಿಕೆಗೆ ಇಳಿದಿರುವ ಅವರನ್ನು ಇನ್ನು ಮೂರು ದಿನಗಳಲ್ಲಿ ಪಕ್ಷದಿಂದ ಉಚ್ಛಾಟಿಸಲಾಗುವುದು. ಈ ಬಗ್ಗೆ ವರಿಷ್ಠರಿಗೆ ವರದಿ ನೀಡಲಾಗಿದೆ" ಎಂದು ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. |