ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಿಕ್ ಅವರು ತೃತೀಯ ರಂಗದ ಸೇರ್ಪಡೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಆದರೆ, ಒರಿಸ್ಸಾ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯಲಿರುವ ತೃತೀಯ ರಂಗದ ಸಮಾವೇಶದಲ್ಲಿ ತನಗೆ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಟ್ನಾಯಿಕ್ ಹೇಳಿದ್ದಾರೆಂದು ಗೌಡರು ತಿಳಿಸಿದ್ದಾರೆ. ಬಿಜೆಡಿ ತೃತೀಯ ರಂಗದ ತೆಕ್ಕೆಗೆ ಬಿದ್ದಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವಾಗಿರುವ ತೃತೀಯ ರಂಗಕ್ಕೆ ಮತ್ತಷ್ಟು ಮೆರಗು ಬಂದಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ವಿಶ್ವಾಸಮತದ ಕಾರ್ಯಕ್ರಮದಲ್ಲಿ ನಿರತವಾಗಿರುವುದರಿಂದ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಟ್ನಾಯಕ್ ಹೇಳಿದ್ದಾರೆ. ಸಂಪರ್ಕ ವಿಮಾನ ಇಲ್ಲದ ಕಾರಣ 12 ಗಂಟೆಗೆ ತಲುಪಲು ಆಗದ ಕಾರಣ ಪಟ್ನಾಯಿಕ್ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ. ಆದರೆ ತಮ್ಮ ಪಕ್ಷ ತೃತೀಯ ರಂಗಕ್ಕೆ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ" ಎಂದರು. " ಒರಿಸ್ಸಾದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆ ದೇಶದ ರಾಜಕೀಯದಲ್ಲಿ ಆಗಿರುವ ಮಹತ್ತರ ಬೆಳವಣಿಗೆಯಾಗಿದೆ. ಕಳೆದ 11 ವರ್ಷಗಳಿಂದ ಕೋಮುವಾದಿ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದ ಬಿಜೆಡಿ, ಇದೀಗ ಮೈತ್ರಿಯಿಂದ ಹೊರಬಂದಿದ್ದು, ತೃತೀಯ ರಂಗದೊಂದಿಗೆ ಗುರುತಿಸಿಕೊಂಡಿದೆ. ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ವಿಶ್ವಾಸ ಮತಾಯಾಚಿಸುವಂತೆ ರಾಜ್ಯಪಾಲ ಎಂ ಸಿ ಭಂಡಾರೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಟ್ನಾಯಿಕ್ ಬುಧವಾರ ಸದನದಲ್ಲಿ ವಿಶ್ವಾಸಮತ ಸಾಬೀತು ಪಡಿಸಬೇಕಾಗಿದೆ" ಎಂದು ಮಾಜಿ ಪ್ರಧಾನಿ ನುಡಿದರು.ಸ್ಥಾನ ಹೊಂದಾಣಿಕೆ ವಿಚಾರಕ್ಕೆ ಸಂಬಂಸಿದಂತೆ ಉಭಯ ಪಕ್ಷಗಳ ನಡುವೆ ಒಡಕುಂಟಾಗಿದೆ. ತಕ್ಷಣ ಒರಿಸ್ಸಾ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿತ್ತು. ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡ ನವೀನ ಪಟ್ನಾಯಿಕ್ ತಟಸ್ಥರಾಗಿ ಉಳಿದಿದ್ದರು. ಕೊನೆ ಗಳಿಗೆಯಲ್ಲಿ ಪಟ್ನಾಯಿಕ್ ತೃತೀಯ ರಂಗಕ್ಕೆ ಸೇರ್ಪಡೆಯಾಗಿದ್ದಾರೆ. ಎಡಪಕ್ಷಗಳು ಹಾಗೂ ಇತರೆ ಶಾಸಕರು ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. |