ಲೋಕಸಭಾ ಚುನಾವಣೆಗೆ ಪಕ್ಷಗಳು ಭರದ ಕಸರತ್ತು ನಡೆಸಿವೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ವ್ಯೂಹ ಹೆಣೆಯುತ್ತಿವೆ. ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿಯನ್ನು ಸ್ವತಃ ದೇವೇಗೌಡರೇ ವಹಿಸಿಕೊಂಡಿದ್ದಾರೆ. ಈಗಾಗಲೇ ತೃತೀಯ ರಂಗದ ಸಮಾವೇಶ ನಡೆಸಲು ಕೂಡಾ ಜೆಡಿಎಸ್ ಸಿದ್ಧತೆ ನಡೆಸಿದೆ. ಬಳ್ಳಾರಿಯ ಲೋಕಸಭಾ ಕ್ಷೇತ್ರದಿಂದ ನಟ ಸುದೀಪ್ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ತಯಾರಿ ನಡೆಸಿದೆ. ಗಣಿಧಣಿಗಳನ್ನು ಧೂಳಿಪಟ ಮಾಡಬೇಕೆಂಬ ಉದ್ದೇಶದಿಂದ ಗೌಡರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ನಟ ಸುದೀಪ್ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೂಲಗಳ ಪ್ರಕಾರ ಸುದೀಪ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಂತೂ ನಿಜ. ಆದರೆ ಯಾವ ಪಕ್ಷ ಎಂದು ಇನ್ನೂ ನಿರ್ಧರಿಸಿಲ್ಲ. ಸದ್ಯ ಸುದೀಪ್ ಚೆನ್ನೈನಲ್ಲಿ ಬಿಜಿಯಾಗಿದ್ದಾರೆ. ಅಲ್ಲಿಂದ ಬಂದ ನಂತರ ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎನ್ನಲಾಗಿದೆ. |