ಅಪ್ಪನಾಗಲಿ ಮಗನಾಗಲಿ ಯಾರೇ ಕಾಂಗ್ರೆಸ್ಸಿನಿಂದ ನಿಂತರೂ ಬಿಜೆಪಿಗೆ ಗೆಲುವು ಖಚಿತ ಎಂದು ಬಿಜೆಪಿಯ ಶಿವಮೊಗ್ಗದ ಘೋಷಿತ ಅಭ್ಯರ್ಥಿ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ಗೆ ಇನ್ನೂ ಸೇರ್ಪಡೆಯಾಗದ ಬಂಗಾರಪ್ಪನವರು ಈಗಲೇ ನಾನೇ ಪಕ್ಷದ ಅಭ್ಯರ್ಥಿ ಎಂದು ಪ್ರಚಾರ ಮಾಡತೊಡಗಿದ್ದಾರೆ. ಸೊರಬ ತಾಲೂಕು ಘಟಕ ಮಗನ ಬಗ್ಗೆ ನಿಷ್ಠೆ ತೋರಿದೆ. ಯಾರೇ ಸ್ಪರ್ಧಿಯಾದರೂ ನನಗೆ ಅಂಜಿಕೆ ಇಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರದ ಸಾಧನೆ, ಕಾಂಗ್ರೆಸ್ ವೈಫಲ್ಯ ನನ್ನ ಗೆಲುವಿಗೆ ಸಹಕಾರಿಯಾಗಲಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ತಾಲೂಕುಗಳಿಗೆ ನೀರೀಕ್ಷೆಗೂ ಮೀರಿ ಅನುದಾನ ಹರಿದು ಬಂದಿದೆ. ಇದು ಬಿಜೆಪಿ ಗೆಲುವಿಗೆ ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಯಡಿಯೂರಪ್ಪ ಪುತ್ರನ ಆಯ್ಕೆಯಲ್ಲಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಕೈವಾಡವಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ರಾಘವೇಂದ್ರ ಅವರು, ಇದರಲ್ಲಿ ಶ್ರೀಗಳ ಕೈವಾಡವಿಲ್ಲ. ಇದು ಶ್ರೀಗಳ ಮೇಲೆ ಕಪ್ಪು ಚುಕ್ಕಿ ತರುವ ಪ್ರಯತ್ನ ಎಂದು ನುಡಿದಿದ್ದಾರೆ. |