ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಆಂತರಿಕ ಭಿನ್ನಮತದ ವಿರುದ್ಧ ಕಹಳೆ ಊದಿರುವ ನಾಯಕರಿಗೆ ಬೆಂಬಲ ನೀಡಲು ಶ್ರೀರಾಮ ಸೇನೆ ಮುಂದಾಗಿದೆ.ಈ ಬಗ್ಗೆ ನಗರದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಬಿಜೆಪಿ ವಿರುದ್ಧ ಭಿನ್ನರಾಗ ಹಾಡಿರುವ ಸಂಸದ ಬಸವನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಬಿ.ಬಿ. ಶಿವಪ್ಪ ಅವರಿಗೆ ಶ್ರೀರಾಮ ಸೇನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.ಹಿಂದುತ್ವ ಆಧಾರದಲ್ಲಿ ಬೆಳವಣಿಗೆ ಕಂಡ ಬಿಜೆಪಿ ಇದೀಗ ಅದನ್ನು ಮರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಹಲವು ದಶಕಗಳಿಂದ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಶಿವಪ್ಪ ಸೇರಿದಂತೆ ಹಲವು ಹಿರಿಯರ ಹೋರಾಟಕ್ಕೆ ನಾವು ಧ್ವನಿಗೂಡಿಸುತ್ತೇವೆ ಎಂದು ಅವರು ಆಶ್ವಾಸನೆ ನೀಡಿದ್ದಾರೆ.ಭ್ರಷ್ಟಾಚಾರ ವಿರೋಧಿಸಿ ಶ್ರೀರಾಮ ಸೇನೆ ಮಾ.12 ರಂದು ರಾಜ್ಯಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನ ಹಮ್ಮಿಕೊಂಡಿದೆ. ಎಲ್ಲಾ ಸ್ತರಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಇದನ್ನು ವಿರೋಧಿಸಿ ಗ್ರಾಮೀಣ ಮಟ್ಟದಿಂದ ಆಂದೋಲನ ನಡೆಸಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು. |