ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಸಂಭವಿಸಿದ್ದ ಸಣ್ಣ ಮಾತಿನ ಚಕಮಕಿ ಮತ್ತೆ ವಿಕೋಪಕ್ಕೆ ಹೋಗಿದ್ದು, ಹಾವೇರಿಯಲ್ಲಿ ಕಲ್ಲು ತೂರಾಟ, ಲಘು ಲಾಠಿ ಪ್ರಹಾರಕ್ಕೆ ಕಾರಣವಾಗಿದೆ.
ಅಂಬೇಡ್ಕರ್ ಪುತ್ಥಳಿಗೂ ಕಲ್ಲು ಬಿದ್ದಿದ್ದು, ಅಂಬೇಡ್ಕರ್ ಗ್ರಂಥಾಲಯವನ್ನು ಧ್ವಂಸಗೊಳಿಸಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ನಿಟ್ಟಿನಲ್ಲಿ ಎರಡು ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಂಬೇಡ್ಕರ್ ವೃತ್ತದಲ್ಲಿ ಕಲ್ಲು ತೂರಾಟ ನಡೆದಿತ್ತು. ಅನಂತರ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆಯ ಬಳಿಕ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಬಲ ನಿಯೋಜಿಸಲಾಗಿದೆ.
ಈದ್ ಮೆರವಣಿಗೆ ಸಂದರ್ಭದಲ್ಲಿ ಕಲ್ಲು, ಚಪ್ಪಲಿ ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
|