ದೇವೇಗೌಡರ ಮಹತ್ವಾಕಾಂಕ್ಷೆಯ ತೃತೀಯ ರಂಗಕ್ಕೆ ತುಮಕೂರಿನ ದಾಬಸ್ ಪೇಟೆಯ ಮಹಾತ್ಮಾಗಾಂಧಿ ಮೈದಾನದಲ್ಲಿ ಚಾಲನೆ ದೊರೆಯಿತು. ಸುಮಾರು ಹತ್ತು ಪಕ್ಷಗಳ ಮುಖಂಡರು ಪ್ರತಿನಿಧಿಗಳು ವೇದಿಕೆಯ ಮೇಲೆ ನೆರೆದಿದ್ದು, ದೇವೇಗೌಡರು ಆತ್ಮವಿಶ್ವಾಸದಿಂದ ಬೀಗುತ್ತಿರುವುದು ಕಂಡು ಬರುತ್ತಿತ್ತು.ಕುತೂಹಲವೆಂಬಂತೆ ತೃತೀಯ ರಂಗದ ನಾಯಕರೆಲ್ಲರೂ ವೇದಿಕೆಗೆ ಬರುವ ಮುಂಚಿತವಾಗಿಯೇ, ದೇವೇಗೌಡರು 11.48ಕ್ಕೆ ದೀಪ ಬೆಳಗಿ ನೆರೆದವರ ಹುಬ್ಬೇರಿಸಿದರು. ಜ್ಯೋತಿಷಿಗಳು ನೀಡಿರುವ ಮುಹೂರ್ತ ಮೀರಬಾರದು ಎಂಬ ಉದ್ದೇಶದಿಂದ ಅವರು ಈ ಕ್ರಮಕ್ಕೆ ಮುಂದಾದರು ಎಂದು ಹೇಳಲಾಗಿದೆ.ಮೈದಲಾನದೆಲ್ಲೆಲ್ಲೂ ಜನತೆ ಕಿಕ್ಕಿರಿತು ತುಂಬಿದ್ದು, ಸಮಾವೇಶದ ಯಶಸ್ಸಿಗೆ ಕೊಡುಗೆ ನೀಡಿದ್ದಾರೆ.ತೃತೀಯ ರಂಗದ ಸೂತ್ರಧಾರಿ ಜೆಡಿಎಸ್ ಅಲ್ಲದೆ, ಸಿಪಿಐ, ಸಿಪಿಐ-ಎಂ, ತೆಲಂಗಾಣ ರಾಷ್ಟ್ರ ಸಮಿತಿ, ತೆಲುಗು ದೇಶಂ, ಎಐಎಡಿಎಂಕೆ, ಫಾರ್ವರ್ಡ್ ಬ್ಲಾಕ್ ಮತ್ತು ಆರ್ಎಸ್‌ಪಿ, ಬಿಎಸ್‌ಪಿ ಪಕ್ಷಗಳ ವರಿಷ್ಠರು, ನಾಯಕರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದಾರೆ.ಸಮಾವೇಶದಲ್ಲಿ ತೃತೀಯರಂಗದ ಪ್ರಮುಖ ರೂವಾರಿಗಳಾದ ಸಿಪಿಎಂನ ಪ್ರಕಾಶ್ ಕಾರಟ್, ಸಿಪಿಐನ ಎ.ಬಿ. ಬರ್ದನ್, ತೆಲುಗು ದೇಶಂನ ಚಂದ್ರಬಾಬು ನಾಯ್ಡು, ಭಜನ್ ಲಾಲ್ ಅವರ ಪುತ್ರ ಕುಲದೀಪ್ ಬಿಶ್ನೋಯಿ ಭಾಗವಹಿಸಿದ್ದಾರೆ. ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಅವರ ಪ್ರತಿನಿಧಿ ಮೈತ್ರೇಯಿ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಅಂತೆಯೇ ಬಿಎಸ್‌ಪಿ ವರಿಷ್ಠೆ ಮಾಯವತಿಯವರ ಪ್ರತಿನಿಧಿ ಸತೀಶ್ ಮಿಶ್ರಾ ಆಗಮಿಸಿದ್ದಾರೆ.ದಕ್ಷಿಣಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿರುವ ನೆಲದಿಂದ ಅದನ್ನು ಕಿತ್ತೊಗೆಯಲು ಪಣತೊಟ್ಟಿದ್ದು, ಅದಕ್ಕಾಗಿ ಇದೇ ನೆಲದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದ ದೇವೇಗೌಡ ನುಡಿದರು. ಇದೇ ವೇಳೆ ಬಿಜೆಪಿಯನ್ನು ಭೂಮಿಯಿಂದಲೇ ಉಚ್ಚಾಟಿಸಬೇಕು ಎಂದು ನುಡಿದರು.ಉದ್ಘಾಟನಾ ಭಾಷಣ ಮಾಡಿದ ಪ್ರಕಾಶ್ ಕಾರಟ್ ಅವರು ಕರ್ನಾಟಕ ಗುಜರಾತ್ ಆಗಲು ಅವಕಾಶ ನೀಡೆವು ಎಂದು ನುಡಿದರು. ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕಾರಟ್ ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ಸಹೋದರ ಸಹೋದರಿಯರೇ ನಿಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳು ಎಂದು ಭಾಷಣ ಆರಂಭಿಸಿದ ಕಾರಟ್ ಚಪ್ಪಾಳೆ ಗಿಟ್ಟಿಸಿಕೊಂಡರು.ಇನ್ನೊರ್ವ ನಾಯಕ ಎ.ಬಿ. ಬರ್ದನ್ ಅವರು ಮಾತನಾಡಿ, ತೃತೀಯ ರಂಗ ತೃತೀಯದರ್ಜೆಯ ಪಕ್ಷ ಎಂಬುದಾಗಿ ಬಿಜೆಪಿಯ ವೆಂಕಯ್ಯನಾಯ್ಡು ಟೀಕಿಸಿರುವುದಕ್ಕೆ ತಿರುಗೇಟು ನೀಡಿ, ಇದು ತೃತೀಯ ದರ್ಜೆಯ ಹೇಳಿಕೆ ಎಂದು ಟೀಕಿಸಿದರು. ರಾಷ್ಟ್ರದಲ್ಲಿ ತಾಂಡವವಾಡುತ್ತಿರುವ ಸಮಸ್ಯೆಗಳನ್ನು ಎತ್ತಿ ತೋರಿದ ಅವರು ಇವುಗಳ ನಿವಾರಣೆಗೆ ತೃತೀಯ ರಂಗವು ಅವಶ್ಯವಾಗಿ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಅಭಿಪ್ರಾಯಿಸಿದರು. |