ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಬಣದ ಮೇಲಾಟದಿಂದ ತೀವ್ರ ಅಸಮಾಧಾನಿತರಾಗಿದ್ದ ಸಂಸದ ಅನಂತ್ ಕುಮಾರ್ ಅವರಿಗೆ ಹಳೆ ಮೈಸೂರು ಪ್ರಾಂತ್ಯದ ಎಂಟು ಲೋಕಸಭಾ ಕ್ಷೇತ್ರಗಳ ಸೀಟು ಹಂಚುವಿಕೆ ಹೊಣೆಯನ್ನು ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಅನಂತ್ ಮತ್ತು ಯಡಿಯೂರಪ್ಪ ಬಣಗಳ ನಡುವಿನ ಗುದ್ದಾಟ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ರಾಜೀ ಸೂತ್ರವೆಂಬಂತೆ ಈ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಪ್ರಕಟಿಸಿರುವ 20 ಅಭ್ಯರ್ಥಿಗಳ ಪಟ್ಟಿಯನ್ನು ಬದಲಿಸುವ ಬದಲಿಗೆ ಬಾಕಿ ಉಳಿದಿರುವ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಅವರಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಹಳೆಯ ನಾಯಕರನ್ನು ಮೂಲೆ ಗುಂಪುಮಾಡಿ ಹೊಸಬರಿಗೆ ಮಣೆಹಾಕಲಾಗುತ್ತದೆ ಎಂಬುದಾಗಿ ಪಕ್ಷದೊಳಗೆ ತೀವ್ರ ಭಿನ್ನಮತ ಭುಗಿಲೆದ್ದ ಹಿನ್ನೆಲೆಯಲ್ಲಿ ಗುರುವಾರ ಸಂಧಾನ ಸಭೆಯನ್ನು ನಡೆಸಲಾಗಿದ್ದು, ಭಿನ್ನಮತಕ್ಕೆ ತಾತ್ಕಾಲಿಕವಾಗಿ ತೇಪೆ ಹಚ್ಚಲಾಗಿದೆ. ಪರಿಣಾಮ ಎಲ್ಲರೂ ಜತೆಯಾಗಿ ಚುನಾವಣೆಗೆ ತೆರಳಲು ಉಭಯ ಬಣಗಳು ನಿರ್ಧರಿಸಿವೆ. |