ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಮತಯಂತ್ರದ ಬದಲಿಗೆ ಹಳೆಯ ಬ್ಯಾಲೆಟ್ ಪೇಪರನ್ನೇ ಬಳಸಬೇಕು ಎಂದು ಕಾಂಗ್ರೆಸ್ ಮುಖಂಡ ದಿವಾಕರ ಬಾಬು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಚುನಾವಣಾ ಮತಯಂತ್ರ ಬಳಸಿದರೆ ಅದರಲ್ಲಿ ಅಕ್ರಮ ಮತದಾನ ನಡೆಸಲು ಸಾಧ್ಯವಾಗುತ್ತದೆ ಎಂದು ದೂರಿರುವ ಬಾಬು, ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರಬರೆದಿರುವುದಾಗಿ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿರುವ ಅಧಿಕಾರಿಗಳು ಆಡಳಿತ ಪಕ್ಷದ ಕೈಗೊಂಬೆಗಳು ಎಂದು ಆರೋಪಿಸಿದ ಅವರು ಇಂತಹ ಅಕ್ರಮ ತಡೆಯಲು ಹಿಂದೆ ಜಾರಿಯಲ್ಲಿದ್ದ ಮತಪತ್ರವನ್ನೇ ಬಳಸಬೇಕು ಎಂದು ಒತ್ತಾಯಿಸಿದ್ದಾರೆ. ಮತಯಂತ್ರದಲ್ಲಿ ಬಟನ್ ಒತ್ತುವ ಮೂಲಕ ಇಂತಿಷ್ಟು ಶೇಕಡಾ ಮತದಾನ ಎಂದು ತೋರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. |