ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ನನ್ನ ಸ್ಪರ್ಧೆಗೆ ಯಡಿಯೂರಪ್ಪರ ಸಮ್ಮತಿ ಇರಲಿಲ್ಲ ಎಂದು ಮುಖ್ಯಮಂತ್ರಿ ಪುತ್ರ ಹಾಗೂ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರು ಮತ್ತು ಸಂಘಟನೆಯ ಒತ್ತಡದಿಂದಾಗಿ ಪಕ್ಷ ನನಗೆ ಟಿಕೆಟ್ ನೀಡಿದೆ. ಕ್ಷೇತ್ರದ ಹಿರಿಯ ರಾಜಕೀಯ ಮುತ್ಸದ್ದಿಗೆ ಪ್ರತಿಸ್ಪರ್ಧಿಯಾಗಿ ನಿಂತಿರುವುದು ಖುಷಿ ಕೊಟ್ಟಿದೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ಸಂಘಟನೆಯೇ ಶಕ್ತಿ. ಇದಕ್ಕೆ ವ್ಯಕ್ತಿ ಮುಖ್ಯವಲ್ಲ. ಶಿಕಾರಿಪುರ ಪುರಸಭೆ ಸದಸ್ಯನಾಗಿರುವ ನನ್ನ ಮೇಲೆ ವಿಶ್ವಾಸವಿಟ್ಟು ಪಕ್ಷ ಲೋಕಸಭೆಗೆ ಟಿಕೆಟ್ ನೀಡಿದೆ. ಕ್ಷೇತ್ರದ ಜನರ ಪ್ರತಿಕ್ರಿಯೆಯಿಂದ ಸಂತಸ ಮೂಡಿದ್ದು, ಗೆಲುವು ತನ್ನದೇ ಎಂಬ ವಿಶ್ವಾಸವಿರುವುದಾಗಿ ಅವರು ತಿಳಿಸಿದ್ದಾರೆ.
"ನನ್ನ ರಾಜಕೀಯ ಪ್ರವೇಶದಲ್ಲಿ ಅಪ್ಪನ ಪಾತ್ರವಿಲ್ಲ. ನಮ್ಮದು ಅಪ್ಪ ಮಕ್ಕಳ ಪಕ್ಷ ಅಲ್ಲ. ನಿಷ್ಠಾವಂತ ಕಾರ್ಯಕರ್ತರ ಪಕ್ಷ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
|