ಸರಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತ ಬೈಸಿಕಲ್ ಹಂಚಿಕೆಯನ್ನು ಲೋಕಸಭಾ ಚುನಾವಣೆ ಮುಗಿಯುವವರೆಗೆ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಚುನಾವಣಾ ಆಯೋಗ ತಾಕೀತು ಮಾಡಿದೆ.
ದರ ಪರಿಷ್ಕರಣೆ ಹಾಗೂ ಇತರ ಕಾರಣದಿಂದ ವಿಳಂಬವಾಗಿದ್ದ ಬೈಸಿಕಲ್ ವಿತರಣೆಗೆ ಇದೀಗ ಚುನಾವಣೆ ಅಡ್ಡಿಯಾಗಿದೆ. ಬೈಸಿಕಲ್ ಹಂಚಿಕೆಯಿಂದ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಆಯೋಗ ಸೂಚಿಸಿದ್ದು, ಮರು ಪರೀಶೀಲನೆಗೆ ಸರ್ಕಾರ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಬೈಸಿಕಲ್ ವಿತರಣೆ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿರುವ ಸುಳಿವು ನೀಡಿದ ಆಯೋಗ, ಸರ್ಕಾರಕ್ಕೆ ದಿಢೀರ್ ಸೂಚನೆ ನೀಡಿರುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಬಿಸಿತುಪ್ಪದಂತಾಗಿದೆ.
ನಾಲ್ಕು ಲಕ್ಷ ಬೈಸಿಕಲ್‌ಗಳ ಪೈಕಿ ಒಂದೂವರೆ ಲಕ್ಷ ಬೈಸಿಕಲ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಗುತ್ತಿಗೆ ಪಡೆದ ಕಂಪೆನಿಗಳು ಉಳಿಕೆ ಬೈಸಿಕಲ್‌ಗಳನ್ನು ಸೂಚನೆ ನೀಡಿದ ಸ್ಥಳಗಳಿಗೆ ರವಾನಿಸಿ, ಜೋಡಣೆ ಮಾಡಿ ಹಂಚಿಕೆಗೆ ಸಿದ್ಧಗೊಳಿಸಿವೆ. ಆದರೆ ಇದೀಗ ವಿತರಣೆಗೆ ಅನುಮತಿ ಸಿಗುವ ತನಕ ಬೈಸಿಕಲ್‌ಗಳನ್ನು ಮಳೆ, ಬಿಸಿಲಿನಲ್ಲಿ ಕಾಯುವ ಸ್ಥಿತಿ ಎದುರಾಗಿದೆ.
|