ರಾಜಕೀಯದಲ್ಲಿ ಆತ್ಯಹತ್ಯೆ ಮಾಡಿಕೊಳ್ಳುವುದು ಬೇಡ. ಮಾಡಿದ ತಪ್ಪಿಗೆ ನಾಯಕರಲ್ಲಿ ಕ್ಷಮೆ ಕೇಳಿ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಹೀಗೆ ಹಿತವಚನ ನೀಡಿದವರು ವಾರ್ತಾ ಹಾಗೂ ಅಬಕಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಾಯ್ಡು ನೀಡಿದ ಹಿತವಚನ ಇದು. "ಇದುವರೆಗೆ ಪಕ್ಷ ಮತ್ತು ನಾಯಕತ್ವದ ವಿರುದ್ಧ ಮತನಾಡಿದವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಇದನ್ನು ಅರಿತು ಎಲ್ಲ ಮುಖಂಡರು ಇತಿಮಿತಿಯಲ್ಲೇ ಮಾತನಾಡುವುದು ಸೂಕ್ತ" ಎಂದು ಅವರು ಹೇಳಿದರು.
"ಈ ಹಿಂದೆ ಯಡಿಯೂರಪ್ಪ ಹಠಾವೋ ಮಾಡಲು ಹೋಗಿ ಯತ್ನಾಳ್ ಅವರು ತಮ್ಮನ್ನೇ ಮುಳುಗಿಸಿಕೊಂಡರು. ಈಗ ಮತ್ತೆ ಅದೇ ದುಸ್ಸಾಹಕ್ಕೆ ಕೈ ಹಾಕಿರುವುದು ಅವರೇ ಸ್ವತಃ ರಾಜಕೀಯ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಅದು ಬೇಡ ಎಂಬುದೇ ನಮ್ಮ ಮನವಿ. ಅವರು ಮಾಡಿರುವ ತಪ್ಪಿಗೆ ಪಕ್ಷದ ನಾಯಕರಲ್ಲಿ ಕ್ಷಮಾಪಣೆ ಕೋರಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಗಿಸಿಕೊಳ್ಳಬೇಕೆಂಬುದೇ ನಮ್ಮ ಇಚ್ಛೆ" ಎಂದು ಕಟ್ಟಾ ಹೇಳಿದ್ದಾರೆ. |