ಕೆಲವು ಕ್ಷೇತ್ರಗಳಿಗೆ ಸ್ಪರ್ಧಿಸಬಾರದೆಂಬ ನಿಲುವಿನಿಂದ ಹಿಂದೆ ಸರಿದಿರುವ ಜೆಡಿಎಸ್ ಎಲ್ಲಾ 28 ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದೆ.
ಬೆಂಗಳೂರು ಕೇಂದ್ರ ಅಥವಾ ಉತ್ತರದಲ್ಲಿ ಸ್ಪರ್ಧಿಸಲಿರುವ ಸಿ.ಕೆ. ಜಾಫರ್ ಷರೀಪ್, ಶಿವಮೊಗ್ಗದಲ್ಲಿ ಎಸ್. ಬಂಗಾರಪ್ಪ, ಉತ್ತರ ಕನ್ನಡದಲ್ಲಿ ಮಾರ್ಗರೇಟ್ ಆಳ್ವ ಹಾಗೂ ಬೀದರ್‌ನಲ್ಲಿ ಧರ್ಮಸಿಂಗ್ ಸ್ಪರ್ಧಿಸಿದರೆ, ಆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸದಿರಲು ತೀರ್ಮಾನಿಸಿತ್ತು. ಆದರೆ ತೃತೀಯ ರಂಗದ ಸಮಾವೇಶದ ಬಳಿಕ ಪಕ್ಷದ ಕಾರ್ಯಕರ್ತರ ಉತ್ಸಾಹ, ಕೆಲ ವಿಚಾರಗಳಲ್ಲಿ ಕಾಂಗ್ರೆಸ್ ಮುಖಂಡರ ನಿರ್ಲಕ್ಷ್ಯ ಧೋರಣೆಯಿಂದ ತಿರುಗೇಟು ನೀಡಲು ನಿರ್ಧರಿಸಿರುವ ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದೆ.
ಈ ನಡುವೆ ತೃತೀಯ ರಂಗದ ನಾಯಕರಿಗೆ ಏರ್ಪಡಿಸಿರುವ ಔತಣಕೂಟದಲ್ಲಿ ಭಾಗವಹಿಸುವ ಸಲುವಾಗಿ ದೆಹಲಿಗೆ ತೆರಳಿರುವ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಸೋಮವಾರದಂದು ವಾಪಸಾಗಲಿದ್ದಾರೆ. ಆ ಬಳಿಕ ಮಾರ್ಚ್ 17 ಮತ್ತು 18ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದ್ದಾರೆ.
ಅದಕ್ಕೂ ಮೊದಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೆಲವು ಜಿಲ್ಲಾ ಮುಖಂಡರ ಜತೆ ಸಭೆ ನಡೆಸಿ ಸಂಭವನೀಯ ಅಭ್ಯರ್ಥಿಗಳ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. |