ಮುಖ್ಯಮಂತ್ರಿ ಮಗ ಎಂದು ಟಿಕೆಟ್ ಕೊಟ್ಟಿಲ್ಲ. ನನ್ನ ಪ್ರತಿಭೆ, ಸಂಘಟನಾ ಚಾತುರ್ಯ, ಜನರೊಂದಿಗಿರುವ ಸಂಪರ್ಕ ಈ ಅಂಶಗಳನ್ನು ಪರಿಗಣಿಸಿ ನನಗೆ ಟಿಕೆಟ್ ನೀಡಲಾಗಿದೆ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಅವರ ನುಡಿಗಳಿವು.
ನಾನು ಕಳೆದ 16 ವರ್ಷಗಳಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಜಿಲ್ಲೆಯಲ್ಲಿ ದುಡಿದಿದ್ದೇನೆ. ಶಿಕಾರಿಪುರ ಪುರಸಭೆ ಸದಸ್ಯನಾಗಿದ್ದೇನೆ. ಅವಕಾಶ ಸಿಕ್ಕರೆ ಶಾಸಕ, ಸಂಸದನಾಗಬೇಕೆಂಬ ಆಸೆ ಇತ್ತು. ಅದು ಈಗಲೇ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಪಕ್ಷ ಟಿಕೆಟ್ ನೀಡುವ ತೀರ್ಮಾನ ಕೈಗೊಂಡಿದೆ. ಅದನ್ನು ಗೌರವಿಸಲೆಂದು, ಒತ್ತಡಕ್ಕೆ ಮಣಿದು ಸ್ಪರ್ಧೆಗಿಳಿದಿದ್ದೇನೆ. ಇದರಲ್ಲಿ ಅಪ್ಪನ ಪಾತ್ರವೇನೂ ಇಲ್ಲ ಎಂದು ರಾಘವೇಂದ್ರ ವಿಜಯ ಕರ್ನಾಟಕ ಪತ್ರಿಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ರಾಘವೇಂದ್ರನ ಸ್ಪರ್ಧೆ ನೆಪಮಾತ್ರಕ್ಕೆ, ಬಿಜೆಪಿ ದೊಡ್ಡ ಪಕ್ಷ. ಬಲವಾಗಿರುವ ಸಂಘಟನೆ ನನ್ನ ಬೆನ್ನಿಗಿದೆ. ಜೊತೆಗೆ ರಾಜ್ಯ ಸರ್ಕಾರದ ಸಾಧನೆ, ಯುಪಿಎ ವೈಫಲ್ಯ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದ ಸಾಧನೆಗಳು, ಅಪ್ಪ ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಮಾಡಿದ ಸಾಧನೆಗಳು ನನಗೆ ಶ್ರೀರಕ್ಷೆ ಎಂದು ರಾಘವೇಂದ್ರ ಸ್ಪಷ್ಟವಾಗಿ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಮುಂದೆ ನಾನು ಸಣ್ಣವನು. ಅನುಭವ ಇಲ್ಲ ನಿಜ. ಅವಕಾಶ ಕೊಟ್ಟರೆ ಅನುಭವ ಗಳಿಸುತ್ತೇನೆ. ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಯುವಕ ರಾಜಕೀಯಕ್ಕೆ ಬೇಕು. ಜನಪ್ರತಿನಿಧಿಯಾಗಬೇಕು ಎಂದು ಜನರು ನಿರೀಕ್ಷಿಸಿದ್ದಾರೆ. ಈಗಾಗಲೇ ಆರು ಕ್ಷೇತ್ರಗಳಲ್ಲಿ ಸುತ್ತಿದ್ದೇನೆ, ಜನರ ನಾಡಿಮಿಡಿತ ಅರಿತಿದ್ದೇನೆ ಎಂದು ಅವರು ಹೇಳಿದರು. |