ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ಬಸವನಗೌಡ ಯತ್ನಾಳ್ ಮತ್ತು ಸ್ವಾಭಿಮಾನಿ ವೇದಿಕೆಯ ಮುಖಂಡ ರಾಮಭಟ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದರು.
ಅವರು ಭಾನುವಾರ ಪುತ್ತೂರಿನಲ್ಲಿ ಪುತ್ತೂರು ಒಕ್ಕಲಿಗ ಗೌಡ ಸಂಘದ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಮ ಭಟ್ ಈ ರೀತಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಬಾರದಿತ್ತು. ಅವರ ವ್ಯಕ್ತಿತ್ವದ ಬಗ್ಗೆ ಗೌರವವಿದೆ. ಆದರೆ ಅವರು ದ್ವೇಷ ಸಾಧನೆ ಮಾಡುತ್ತಿದ್ದಾರೆ ಅವರಿಗೆ ಅಧಿಕಾರದ ಆಸೆ ಪ್ರಾರಂಭವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮುಂದೆ ನಡೆದರೆ ರಾಮ ಭಟ್ ಉಚ್ಚಾಟನೆ ಖಂಡಿತ ಎಂದು ಸ್ಪಷ್ಟಪಡಿಸಿದರು.
ಅಲ್ಲದೇ ಸ್ವಾಭಿಮಾನಿ ವೇದಿಕೆ ಜೊತೆ ಮಾತುಕತೆ ಇಲ್ಲ ಅವರ ಪಾಲಿಗೆ ಬಿಜೆಪಿ ಬಾಗಿಲು ಮುಚ್ಚಿದೆ. ಜೊತೆಗೆ ಯತ್ನಾಳ್ ಅವರದ್ದೂ ಮುಗಿದ ಅಧ್ಯಾಯ. ಅವರನ್ನು ಇನ್ನೆರಡು ದಿನಗಳಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡುವ ಕೆಲಸ ನೆರವೇರಿಸಲಾಗುವುದು ಎಂದರು. |