ಅಧಿಕಾರ ಹಾಗೂ ದುಡ್ಡಿನ ಮದದಿಂದ ಬೀಗುತ್ತಿರುವ ಬಿಜೆಪಿ ನಾಯಕರಿಗೆ ರಾಜ್ಯದ ಮತದಾರರು ತಕ್ಕ ಪಾಠ ಕಲಿಸಲು, ಕಾಂಗ್ರೆಸ್‌ಗೆ ಬೆಂಬಲ ನೀಡಬೇಕೆಂದು ಶನಿವಾರವಷ್ಟೇ ಕಾಂಗ್ರೆಸ್‌ಗೆ ವಿಧ್ಯುಕ್ತವಾಗಿ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಕರೆ ನೀಡಿದ್ದಾರೆ.
ದೆಹಲಿಯಿಂದ ಭಾನುವಾರ ಮಧ್ನಾಹ್ನ ನಗರಕ್ಕಾಗಮಿಸಿದ ಬಂಗಾರಪ್ಪ, ರಾಜ್ಯದಲ್ಲಿ ಬಿಜೆಪಿ 20ರಿಂದ 23ಲೋಕಸಭಾ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಗಲುಕನಸು ಕಾಣುತ್ತಿದ್ದಾರೆಂದು ಲೇವಡಿ ಮಾಡಿದರು.
ದುಡ್ಡಿನ ಮದದಿಂದ ಯಡಿಯೂರಪ್ಪ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಅವರು ಹೇಳಿದರು. ರಾಜ್ಯದ ಜನತೆ ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸಬೇಕೆಂದು ಅವರು ಮನವಿ ಮಾಡಿದರು. ಅಲ್ಲದೇ ಕೇಂದ್ರದಲ್ಲಿ ಮತ್ತೊಮ್ಮೆ ಯುಪಿಎ ಸರ್ಕಾರ ರಚನೆಯಾಗಬೇಕೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನಾಯಕತ್ವದಲ್ಲಿ ವಿಶ್ವಾಸವಿಟ್ಟು ತಾವು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರ ನೇತೃತ್ವದಲ್ಲಿ ಮತ್ತೊಮ್ಮೆ ಯುಪಿಎ ಅಧಿಕಾರಕ್ಕೆ ಬರಬೇಕೆಂಬುದು ತಮ್ಮ ಆಶಯ ಎಂದರು. |