ಭಾರತೀಯ ಜನತಾ ಪಕ್ಷದ ಮುಖಂಡರಿಗೆ ತಾಕತ್ತಿದ್ದರೆ ನಮ್ಮನ್ನು ಉಚ್ಛಾಟಿಸಲಿ ಎಂದು ಲೋಕಸಭಾ ಸದಸ್ಯ ಬಸವನಗೌಡ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡರಿಗೆ ಸವಾಲು ಹಾಕಿದ್ದಾರೆ.
ಅವರು ಪುತ್ತೂರಿನಲ್ಲಿ ಸ್ವಾಭಿಮಾನಿ ವೇದಿಕೆಯ ಸಂಚಾಲಕ ರಾಮಭಟ್ ಅವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಬಿಜೆಪಿ ಪಕ್ಷದಲ್ಲಿ ಮೂಲ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ, ವಲಸಿಗರಿಗೆ ಮಣೆಹಾಕುವ ಮೂಲಕ ಪಕ್ಷದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಕಿಡಿಕಾರಿದ ಯತ್ನಾಳ್, ಬಿಜೆಪಿ ಮುಖಂಡರಿಗೆ ತಾಕತ್ತಿದ್ದರೆ ನನ್ನ ಉಚ್ಛಾಟಿಸಲಿ ನೋಡುವ ಎಂದು ಸವಾಲು ಹಾಕಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಸಭಾ ಸದಸ್ಯ ಬಸವನಗೌಡ ಯತ್ನಾಳ್ ಮತ್ತು ಸ್ವಾಭಿಮಾನಿ ವೇದಿಕೆಯ ಮುಖಂಡ ರಾಮಭಟ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಭಾನುವಾರ ಹೇಳಿಕೆ ನೀಡಿದ್ದರು.
ರಾಮ ಭಟ್ ಈ ರೀತಿ ಮಾನಸಿಕ ಅಸ್ವಸ್ಥತೆಗೆ ಒಳಗಾಗಬಾರದಿತ್ತು. ಅವರ ವ್ಯಕ್ತಿತ್ವದ ಬಗ್ಗೆ ಗೌರವವಿದೆ. ಆದರೆ ಅವರು ದ್ವೇಷ ಸಾಧನೆ ಮಾಡುತ್ತಿದ್ದಾರೆ ಅವರಿಗೆ ಅಧಿಕಾರದ ಆಸೆ ಪ್ರಾರಂಭವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮುಂದೆ ನಡೆದರೆ ರಾಮ ಭಟ್ ಉಚ್ಚಾಟನೆ ಖಂಡಿತ ಎಂದು ಸ್ಪಷ್ಟಪಡಿಸಿದ್ದರು. ಅದಕ್ಕೆ ಪ್ರತಿಯಾಗಿ ಯತ್ನಾಳ್ ಇಂದು ಪ್ರತಿಕ್ರಿಯಿಸಿ ಮಾತನಾಡಿದರು. |