ಪ್ರಚೋದನಾಕಾರಿ ಭಾಷಣ ಹಾಗೂ ಪ್ರೇಮಿಗಳ ದಿನಾಚರಣೆಗೆ ಅಡ್ಡಿ ಪಡಿಸಿರುವ ಕಾರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಮಂಗಳೂರಿಗೆ ಪ್ರವೇಶಿಸದಂತೆ ಒಂದು ವರ್ಷಗಳ ಕಾಲ ನಿರ್ಬಂಧ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಸೋಮವಾರ ತಿಳಿಸಿದ್ದಾರೆ.ಪ್ರಚೋದನಾಕಾರಿ ಭಾಷಣ ಮಾಡಿರುವ ಹಿನ್ನೆಲೆಯಲ್ಲಿ ಮುತಾಲಿಕ್ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ಹೇರಿದೆ. ಮುನ್ನೆಚ್ಚರಿಕೆ ಅಂಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶಕ್ಕೆ ಸಂಬಂಧಿಸಿದಂತೆ ತಾನು ಯಾವುದೇ ಕಾರಣಕ್ಕೂ ನ್ಯಾಯಾಲಯದ ಮೆಟ್ಟಿಲು ಹತ್ತುವುದಿಲ್ಲ ಎಂದು ಮುತಾಲಿಕ್ ಹೇಳಿದ್ದು, ತಾನು ಸುಮಾರು ಹತ್ತು ಸಾವಿರ ಕಾರ್ಯಕರ್ತರೊಂದಿಗೆ ದ.ಕ. ಜಿಲ್ಲೆ ಪ್ರವೇಶಿಸುತ್ತೇನೆ ಆಗ ತಾಕತ್ತಿದ್ದರೆ ಜಿಲ್ಲಾಡಳಿತ ನನ್ನ ತಡೆಯಲಿ ಎಂದು ಈ ಮೊದಲೇ ಸವಾಲು ಹಾಕಿದ್ದರು.ನಗರದ ಎಮ್ನೇಶಿಯಾ ಪಬ್ ದಾಳಿ ಪ್ರಕರಣದ ಮೂಲಕ ಶ್ರೀರಾಮಸೇನೆ ಸಂಘಟನೆ ವಿವಾದದ ಕೇಂದ್ರ ಬಿಂದುವಾಗುವ ಮೂಲಕ ರಾಷ್ಟ್ರವ್ಯಾಪಿ ಟೀಕೆ ಹಾಗೂ ಆಕ್ರೋಶಕ್ಕೂ ಒಳಗಾಗಿತ್ತು. ಬಳಿಕ ಪ್ರೇಮಿಗಳ ದಿನಾಚರಣೆಯಂದ ಸೆರೆಸಿಕ್ಕುವ ಜೋಡಿಗಳಿಗೆ ಸ್ಥಳದಲ್ಲೇ ಮದುವೆ ಮಾಡಿಸುವ ಘೋಷಣೆಯಿಂದಾಗಿ ಮುತಾಲಿಕ್ ತೀವ್ರ ಇಕ್ಕಟ್ಟಿಗೆ ಸಿಲುಕಿದ್ದರು.ಈ ಘಟನೆಯಲ್ಲಿ ಮುತಾಲಿಕ್ ಅವರನ್ನು ಬಂಧಿಸಲಾಗಿತ್ತು. ಆ ನಿಟ್ಟಿನಲ್ಲಿ ಮುತಾಲಿಕ್ ಪ್ರವೇಶ ನಿರ್ಬಂಧ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. |