ಶೃಂಗೇರಿ ಸಮೀಪದ ಮಾತುವಳ್ಳಿ ಬಳಿ ಮಂಗಳವಾರ ಬೆಳಿಗ್ಗೆ ನಕ್ಸಲ್ ನಿಗ್ರಹ ಪಡೆಯ ಮೇಲೆ ನಕ್ಸಲ್ ತಂಡ ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಓರ್ವ ಪೇದೆ ಗಾಯಗೊಂಡಿರುವ ಘಟನೆ ನಡೆಯುವ ಮೂಲಕ ನಕ್ಸಲ್ ಅಟ್ಟಹಾಸ ಮತ್ತೆ ಮುಂದುವರಿದಂತಾಗಿದೆ.
ಮಲೆನಾಡಿನಲ್ಲಿ ಕಳೆದ ಕೆಲವು ತಿಂಗಳಿನಿಂದ ತಣ್ಣಗಾಗಿದ್ದ ನಕ್ಸಲೀಯರ ಅಟ್ಟಹಾಸ ಇದೀಗ ಮತ್ತೆ ಮುಂದುವರಿದಿದ್ದು, ಇಂದು ಬೆಳಿಗ್ಗೆ ಎಎನ್‌ಎಫ್ ಮೇಲೆ ಗ್ರೆನೇಡ್ ದಾಳಿ ನಡೆಸಿದ ಪರಿಣಾಮ ಪೇದೆ ತಾರೇಶ್ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 8ರಿಂದ 10 ಮಂದಿ ಇದ್ದ ನಕ್ಸಲೀಯರ ತಂಡ ಈ ಕೃತ್ಯ ಎಸಗಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಎಲ್ಲರೂ ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದು, ಗಾಯಗೊಂಡ ತಾರೇಶ್ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. |