ಬೆಳಗಾವಿ ಮಹಾನಗರಪಾಲಿಕೆಯ ನೂತನ ಕಟ್ಟಡದ ಮೇಲೆ ಮರಾಠಿ ಧ್ವಜ ಹಾರಿಸಲು ಸಂಸದ ಸುರೇಶ್ ಅಂಗಡಿ ಕೈಜೋಡಿಸಿರುವ ವಿರುದ್ಧ ನಾರಾಯಣಗೌಡ ನೇತೃತ್ವದ ಕರವೇ ಬಣ ತೀವ್ರ ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆಗಿಳಿದಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸಿದೆ.
ಮರಾಠಿಗರ ಜೊತೆ ಕೈಜೋಡಿಸಿ ಕನ್ನಡಿಗರಿಗೆ ದ್ರೋಹ ಎಸಗಿರುವ ಬಿಜೆಪಿ ಸಂಸದ ಸುರೇಶ್ ಅಂಗಡಿ ಹಾಗೂ ಸ್ಥಳೀಯ ಶಾಸಕ ಸಂಜಯ್ ಪಾಟೀಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು, ಅಲ್ಲದೇ ಅವರಿಬ್ಬರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಕನ್ನಡ ವಿರೋಧಿ ಧೋರಣೆ ತಾಳಿರುವ ಬಿಜೆಪಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾಳೆಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಗುಡುಗಿದ್ದಾರೆ.
ಗಡಿನಾಡು ಬೆಳಗಾವಿಯಲ್ಲಿ ಮಹಾನಗರ ಪಾಲಿಕೆಯ ನೂತನ ಕಟ್ಟಡ ಉದ್ಘಾಟನೆಯಾಗಿದ್ದು, ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಬೇಕೆಂದು ಒತ್ತಾಯಿಸಿ ಸೋಮವಾರ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಎಂಇಎಸ್ ಕಾರ್ಯಕರ್ತರು ಕೂಡ ಪಾಲಿಕೆ ಮೇಲೆ ಮರಾಠಿ ಧ್ವಜವನ್ನೇ ಹಾರಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆಗಿಳಿದಿದ್ದರು. ಅದಕ್ಕೆ ಸಾಥ್ ನೀಡಿದವರು ಆಡಳಿತಾರೂಢ ಬಿಜೆಪಿ ಪಕ್ಷದ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ್ ಪಾಟೀಲ್.
ಕನ್ನಡಿಗರ ಹಿತ ಕಾಯುವುದಾಗಿ ಹೇಳಿರುವ ಸರ್ಕಾರವೇ ಮರಾಠಿಗರ ಜೊತೆ ಕೈಜೋಡಿಸುವ ಮೂಲಕ ರಾಜಕೀಯ ಮಾಡಲು ಹೊರಟಿದೆ. ಕನ್ನಡ ವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಗೌಡರು ಕಿಡಿ ಕಾರಿದ್ದಾರೆ. |