ಕರ್ನಾಟಕದಲ್ಲಿ ತೃತೀಯರಂಗಕ್ಕೆ ಅಸ್ತಿತ್ವವೇ ಇಲ್ಲ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ರೀತಿಯಲ್ಲೂ ಆತಂಕವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಹಾಗೂ ಕುಮಾರಸ್ವಾಮಿ ಇದ್ದಾರೆ ಎಂಬ ಕಾರಣಕ್ಕೆ ತೃತೀಯರಂಗ ಅಸ್ತಿತ್ವದಲ್ಲಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಸಿಪಿಐ, ಸಿಪಿಎಂ, ಎಐಎಡಿಎಂಕೆ, ಡಿಎಂಕೆ, ತೆಲುಗುದೇಶಂ ಈ ಯಾವ ಪಕ್ಷಗಳಿಗೂ ರಾಜ್ಯದಲ್ಲಿ ನೆಲೆ ಇಲ್ಲ. ಇನ್ನು ಕರ್ನಾಟಕದಲ್ಲಿ ತೃತೀಯರಂಗ ಅಲೆ ಎಬ್ಬಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೊಮ್ಮೆ ದೇಶದ ಪ್ರಧಾನಿ ಆಗುವರೆಂದು ಯಾವುದೋ ಜ್ಯೋತಿಷಿ ಭವಿಷ್ಯ ನುಡಿದಿರಬೇಕು. ಈ ಕಾರಣಕ್ಕೆ ದೇವೇಗೌಡರು ತೃತೀಯ ರಂಗ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಯುಪಿಎ ನಡುವೆಯೇ ನೇರ ಸ್ಪರ್ಧೆ ಆಗಲಿದೆ ಹೊರತು ತೃತೀಯರಂಗ ಮಧ್ಯೆ ಬರಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.
ತೃತೀಯ ರಂಗ ಉದಯವಾದ ನಂತರ ಕಾಂಗ್ರೆಸ್-ಬಿಜೆಪಿಗೆ ನಿದ್ದೆ ಬರುತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುತ್ತಿದೆಯೇ ಎಂದು ಪ್ರಶ್ನಿಸಿದರು. |