ಕಾಂಗ್ರೆಸ್‌ನಲ್ಲಿ ಒಳಜಗಳ ಎಂಬುದಾಗಿ ಸದಾ ದೂರುತ್ತಿದ್ದ ಬಿಜೆಪಿಯಲ್ಲೂ ಅದೇ ಸಂಪ್ರದಾಯ ಮುಂದುವರಿದಿದ್ದು,ಒಂದೆಡೆ ಪಕ್ಷದ ಪ್ರಮುಖ ಮುಖಂಡರಾದ ಅರುಣ್ ಜೈಟ್ಲಿ ಮತ್ತು ರಾಜನಾಥ್ ಸಿಂಗ್ ನಡುವೆ ಜಟಾಪಟಿ ನಡೆಯುತ್ತಿದ್ದರೆ, ಮತ್ತೊಂದೆಡೆ ಅನಂತ್ ಕುಮಾರ್ ಮೇಲಿನ ಮುನಿಸಿನಿಂದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.
ರಾಜನಾಥ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ದೆಹಲಿಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಸಭೆಗೆ ಜೈಟ್ಲಿ ಗೈರು ಹಾಜರಾಗಿದ್ದಾರೆ. ಈ ಸಭೆಯಲ್ಲಿ ಹಿರಿಯ ಮುಖಂಡರಾದ ಎಲ್.ಕೆ.ಆಡ್ವಾಣಿ, ವೆಂಕಯ್ಯ ನಾಯ್ಡು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಿದ್ದರು.
ಸಂಸದ ಅನಂತ್ ಕುಮಾರ್ ಸೋಮವಾರವಷ್ಟೇ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಹಾಡಿ ಹೊಗಳಿ ತೇಪೆ ಹಚ್ಚಿದ್ದರು. ಆದರೂ ಕೂಡ ಇಬ್ಬರ ನಡುವಿನ ಕೋಳಿ ಜಗಳ ಇದೀಗ ಬಹಿರಂಗಗೊಂಡಿದ್ದು, ಇಂದು ನಡೆದ ಸಭೆಯಲ್ಲಿ ಸ್ವತಃ ಯಡಿಯೂರಪ್ಪನವರೇ ಗೈರು ಹಾಜರಾಗುವ ಮೂಲಕ ಬಿಜೆಪಿಯಲ್ಲಿನ ರಂಪಾಟ ಜಗಜ್ಜಾಹೀರಾಗತೊಡಗಿದೆ. |