ಶಾಂತಿ ಸೌಹಾರ್ದತೆ ಕದಡುತ್ತಿರುವ ಹಿಂದೂ ಸಮಾಜೋತ್ಸವಗಳನ್ನು ನಡೆಸಲು ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಚುನಾವಣಾ ಆಯೋಗವನ್ನು ಮಂಗಳವಾರ ಒತ್ತಾಯಿಸಿದೆ.
ಚುನಾವಣಾ ನೀತಿ ಸಂಹಿತೆ ಬಗ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಇಂದು ಕರೆದಿದ್ದ ರಾಜಕೀಯ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಿಂದೂ ಸಮಾಜೋತ್ಸವಗಳನ್ನು ಸಂಘಟಿಸುವ ಮೂಲಕ ಬಿಜೆಪಿ ರಂಗೋಲಿ ಕೆಳಗೆ ನುಸುಳುವ ಪ್ರಯತ್ನ ನಡೆಸಿದೆ.
ಚುನಾವಣಾ ದೃಷ್ಟಿಯಿಟ್ಟುಕೊಂಡು ಆಯೋಜಿಸುವ ಈ ಸಮಾವೇಶಗಳಿಗೆ ಅವಕಾಶ ನೀಡದಂತೆ ಸಭೆಯಲ್ಲಿ ಈ ಪಕ್ಷಗಳು ಒತ್ತಾಯಿಸಿದವು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ರಾಮಚಂದ್ರಪ್ಪ ಹಾಗೂ ಜೆಡಿಎಸ್‌ನ ದತ್ತರವರು ಹಿಂದು ಮತಗಳನ್ನು ಒಗ್ಗೂಡಿಸಲು ಈ ಸಮಾಜೋತ್ಸವ ಆಯೋಜಿಸುತ್ತಿರುವುದನ್ನು ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು. |