ಬೆಳಗಾವಿ ಮಹಾನಗರ ಪಾಲಿಕೆ ನೂತನ ಕಟ್ಟಡದ ಮೇಲೆ ಭಗವಾಧ್ವಜ ಹಾರಿಸಲು ಪ್ರಯತ್ನಿಸಿದ ಬಿಜೆಪಿಯ ಸಂಸದ ಹಾಗೂ ಶಾಸಕರು ತಾವು ಮಹಾರಾಷ್ಟ್ರದ ಪರವೋ ಅಥವಾ ಕರ್ನಾಟಕದ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಾಕೀತು ಮಾಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದಿರುವ ಘಟನೆ ದುಃಖಕರ ಮತ್ತು ಖಂಡನೀಯ.ಬಿಜೆಪಿ ಸಂಸದರಾದ ಸುರೇಶ್ ಅಂಗಡಿ ಮತ್ತು ಬಿಜೆಪಿ ಶಾಸಕ ಸಂಜಯ ಪಾಟೀಲ ಅವರು ವೈಯಕ್ತಿಕ ಆಸೆಯಿಂದ ಸ್ಥಾನಕ್ಕಾಗಿ ಆ ರೀತಿ ನಡೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದರು.
ಭಗವಾಧ್ವಜ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ನ್ಯಾಯಾಲಯದ ತೀರ್ಪು ಗೌರವಿಸದೆ ಸಂಸದ ಸುರೇಶ್ ಅಂಗಡಿ ಮತ್ತು ಸಂಜಯ ಪಾಟೀಲರು ಪಾಲಿಕೆ ಕಟ್ಟಡದ ಮೇಲೆ ಎಂಇಎಸ್ ಬೆಂಬಲಿಗರೊಂದಿಗೆ ಭಗವಾಧ್ವಜ ಹಾರಿಸಲು ಹೊರಟ್ಟಿದ್ದು ದೊಡ್ಡ ಅಪರಾಧ ಎಂದರು.
ರಾಜ್ಯದ ಹಿತಕ್ಕೆ ವಿರುದ್ಧವಾದ ಸಂಸದ ಮತ್ತು ಶಾಸಕರ ವರ್ತನೆ ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಹೋರಾಟಗಾರರ ಜತೆಗಿದ್ದೇ ರಾಜ್ಯದ ಹಿತ ಕಾಪಾಡಬೇಕಿತ್ತು. ರಾಜ್ಯದ ಪರ ನಿಲುವು ಕೈಗೊಳ್ಳಬೇಕಿತ್ತು ಎಂದು ಆಗ್ರಹಿಸಿದರು.
|