ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಮಾರ್ಚ್ 23 ರಂದು ನಡೆಯುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಬಳಿಕವೇ ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಸೋನಿಯಾಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುವುದರಿಂದ ಪಕ್ಷದಲ್ಲಿ ಒಗ್ಗಟ್ಟು ಹಾಗೂ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಸೋನಿಯಾ ಭೇಟಿಗೂ ಮುನ್ನ ಬಂಡಾಯ ಅಥವಾ ಒಡಕಿನ ಮಾತಿಗೆ ಅವಕಾಶ ಸಿಗಬಾರದೆಂಬ ಕಾರಣಕ್ಕಾಗಿ ಅಲ್ಲಿಯ ತನಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದಿರುವ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಂಡಿರುವುದಾಗಿ ಅವರು ಹೇಳಿದರು.
ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಒಂದೆಡೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆದಿದ್ದರೆ ಮತ್ತೊಂದೆಡೆ ದಾವಣಗೆರೆಯಲ್ಲಿ ಸೋನಿಯಾಗಾಂಧಿ ನೇತೃತ್ವದಲ್ಲಿ ಸಮಾವೇಶ ನಡೆಸಲು ಸಿದ್ಧತೆಗಳು ನಡೆದಿವೆ.
ಹಲವು ಕ್ಷೇತ್ರಗಳಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್‌ಗೆ ತಲೆ ನೋವಾಗಿದೆ. ಆದಷ್ಟು ಬಂಡಾಯವನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಹೈಕಮಾಂಡ್ ಈ ಧೋರಣೆ ತಳೆದಿದೆ. ಸೋನಿಯಾ ಭೇಟಿಯ ಮರು ದಿನವೇ ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಗೆ ಮುಕ್ತಿ ಸಿಗುವ ಸಾಧ್ಯತೆ ಇದೆ. |