ಮಂಗಳೂರಿನ ಪಬ್ ಮೇಲಿನ ದಾಳಿ, ಪ್ರೇಮಿಗಳ ದಿನಾಚರಣೆಗೆ ಅಡ್ಡಿ ಮಾಡುವ ಮೂಲಕ ರಾಷ್ಟ್ರದಾದ್ಯಂತ ವಿವಾದಕ್ಕೊಳಗಾಗಿದ್ದ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮಸೇನೆಗೆ ರಾಜ್ಯದಲ್ಲಿ ತಳವೂರಲು ಅವಕಾಶ ನೀಡುವುದಿಲ್ಲ ಎಂದು ಗೋವಾ ಗೃಹ ಸಚಿವ ರವಿ ನಾಯ್ಕ್ ತಿಳಿಸಿದ್ದಾರೆ.
ಗೋವಾದಲ್ಲೂ ಕೂಡ ತಮ್ಮ ತತ್ವ ಸಿದ್ದಾಂತಗಳೊಂದಿಗೆ ಶ್ರೀರಾಮಸೇನೆಯ ಶಾಖೆಯನ್ನು ತೆರೆಯುವುದಾಗಿ ಘೋಷಿಸಿರುವ ಹಿನ್ನೆಯಲ್ಲಿ ಕಟ್ಟಾ ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆಯ ಕುರಿತು ಪ್ರತಿಕ್ರಿಯೆ ನೀಡಿ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಶ್ರೀರಾಮಸೇನೆಯ ಘಟಕವನ್ನು ಸ್ಥಾಪಿಸಲು ಯಾವುದೇ ಕಾರಣಕ್ಕೂ ಸಂಘಟನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮಸೇನೆ ಸ್ಥಾಪಿಸಲು ಪ್ರಮೋದ್ ಮುತಾಲಿಕ್ ಅವರಿಗೆ ರಾಜ್ಯದಲ್ಲಿ ಅವಕಾಶವಿಲ್ಲ, ಇದು ಪ್ರಕೃತಿ ಸೌಂದರ್ಯ ರಾಜ್ಯ, ಅವರ ತತ್ವ ಸಿದ್ದಾಂತಗಳನ್ನು ಒಪ್ಪಿಕೊಳ್ಳುವ ಬೆಂಬಲಿಗರು ಇಲ್ಲಿಲ್ಲ ಎಂದರು. ಅಲ್ಲದೇ ಶ್ರೀರಾಮಸೇನೆಯನ್ನು ನಿಷೇಧಿಸಲು ಕೂಡ ಸರ್ಕಾರ ಹಿಂದೆ-ಮುಂದೆ ನೋಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮಹಿಳೆಯರು ಎಲ್ಲೆಂದರಲ್ಲಿ ಓಡಾಡಲು ಅವರು ಮುಕ್ತರು, ಅವರಿಗೆ ಏನು ಬೇಕು, ಬೇಡ ಎಂಬುದನ್ನು ಪುರುಷರು ನಿರ್ಧರಿಸಬೇಕಾದ ಅಗತ್ಯವಿಲ್ಲ. ಅವರನ್ನು ಹದ್ದುಬಸ್ತಿನಲ್ಲಿಡುವ ಸರ್ವಾಧಿಕಾರದ ಧೋರಣೆ ಸರಿಯಲ್ಲ ಎಂದು ನಾಯ್ಕ್ ತಿಳಿಸಿದರು.
ಗೋವಾದಿಂದ 66ಕಿ.ಮೀ.ದೂರದಲ್ಲಿರುವ ವೆಂಗೂರ್ಲಾದಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶ್ರೀರಾಮಸೇನೆಯ ಮುತಾಲಿಕ್, ಗೋವಾದಲ್ಲೂ ಶ್ರೀರಾಮಸೇನೆಯ ಘಟಕ ಸ್ಥಾಪಿಸುವಂತೆ ಕೋರಿ ಹಲವಾರು ಮನವಿ ಬಂದಿರುವುದಾಗಿ ಹೇಳಿದ್ದರು. |