ದಂಡ ಕಟ್ಟಲು ಹಣವಿಲ್ಲದೆ ಜೈಲಿನಲ್ಲಿಯೇ ಕಾಲಕಳೆಯುತ್ತಿದ್ದ ಕೈದಿಗಳಿಗೆ ಆರ್ಥಿಕ ನೆರವು ನೀಡಿ ಬಿಡುಗಡೆಯ ಭಾಗ್ಯ ಕಲ್ಪಿಸಿದ ಚಿತ್ರನಟ ದುನಿಯಾ ವಿಜಯ ಕೈದಿಗಳ ಪಾಲಿಗೆ 'ರಿಯಲ್ ಹೀರೋ' ಎಂಬ ಶ್ಲಾಘನೆಗೆ ಪಾತ್ರರಾಗಿರುವ ಘಟನೆ ಮೈಸೂರು ಜೈಲಿನಲ್ಲಿ ನಡೆದಿದೆ.ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಕಳೆದ ಮೂರು ದಿನಗಳಿಂದ 'ದೇವರು' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆ ಸಂದರ್ಭದಲ್ಲಿ ನಟ ದಂಡಕಟ್ಟಲು ಹಣವಿಲ್ಲದೆ ಕಂಬಿಹಿಂದೆಯೇ ದಿನಕಳೆಯುತ್ತಿದ್ದ ಕೈದಿಗಳ ಕಷ್ಟದ ಪರಿಸ್ಥಿತಿ ವಿಜಿ ಗಮನಕ್ಕೆ ಬಂದಿತ್ತು.ಮಂಗಳವಾರವಷ್ಟೇ ನಾಲ್ಕು ಜನ ಕೈದಿಗಳ ದಂಡವನ್ನು ಪಾವತಿಸುವ ಮೂಲಕ ಅವರನ್ನು ಬಂಧಮುಕ್ತಗೊಳಿಸಲು ಸಹಕರಿಸಿದ್ದರು. ಅದೇ ರೀತಿ ಬುಧವಾರ ಕೂಡ ವರದಕ್ಷಿಣೆ ಆರೋಪದಲ್ಲಿ ಬಂಧಿತರಾಗಿದ್ದ ಪಿರಿಯಾಪಟ್ಟಣದ ಗೌರಮ್ಮ ಎಂಬಾಕೆಯ 50 ಸಾವಿರ ರೂಪಾಯಿ ದಂಡವನ್ನು ಕಟ್ಟಿ, ಆಕೆಯನ್ನು ಬಿಡುಗಡೆ ಮಾಡಿಸುವ ಮೂಲಕ ನಟ ವಿಜಯ್ ನಿಜ 'ದೇವರೇ' ಆಗಿಬಿಟ್ಟರು.60 ರ ಹರೆಯದ ಹೃದಯ ಖಾಯಿಲೆಗೆ ಒಳಗಾಗಿದ್ದ ಗೌರಮ್ಮ ಅವರು ದಂಡ ಕಟ್ಟಲು 50ಸಾವಿರ ರೂ.ಇಲ್ಲದೇ ಜೈಲಿನಲ್ಲಿಯೇ ಕಾಲ ಕಳೆಯುತ್ತಿದ್ದರು. ಅವರ ಸ್ಥಿತಿಯನ್ನು ಕಂಡ ವಿಜಯ್ ಇಂದು ಠಾಣಾಧಿಕಾರಿಯವರಿಗೆ ದಂಡದ ಪೂರ್ಣ ಹಣವನ್ನು ಪಾವತಿಸಿ ಕೈದಿ ಗೌರಮ್ಮ ಅವರಿಗೆ ಬಿಡುಗಡೆಯ ಹಾದಿ ಕಲ್ಪಿಸುವ ಮೂಲಕ ಮೈಸೂರು ಜೈಲಿನ ಕೈದಿಗಳ ಪಾಲಿಗೆ ನಟ ರಿಯಲ್ ಹೀರೋ ಆಗಿಬಿಟ್ಟರು. |