ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸಲು ಯತ್ನಿಸಿರುವ ಬಿಜೆಪಿ ಸಂಸದ ಸುರೇಶ್ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ್ ಅವರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಬೆಂಗಳೂರು ಮಹಾನಗರ ಯುವಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಜನತಾದಳ ಆಗ್ರಹಿಸಿವೆ.
ಬೆಳಗಾವಿಯಲ್ಲಿ ಕನ್ನಡಿಗರ ಮತ ಪಡೆದು ನಂತರ ಮರಾಠಿಗರೊಂದಿಗೆ ಕೈ ಜೋಡಿಸಿ ಗಡಿವಿವಾದವನ್ನು ಜೀವಂತವಾಗಿರಿಸಲು ಬಿಜೆಪಿ ಸಂಸದರು, ಶಾಸಕರು ಯತ್ನಿಸಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಸ್.ಟಿ.ಸೋಮಶೇಖರ್ ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ಮತ ಪಡೆಯುವ ಹುನ್ನಾರದಿಂದ ಈ ಇಬ್ಬರು ನಾಯಕರ ಕೀಳು ಮಟ್ಟದ ರಾಜಕೀಯ ಕಡೆ ಬಿಜೆಪಿ ವಾಲಿದ್ದು ಗಡಿ ವಿವಾದವನ್ನು ಬಗೆಹರಿಸಲು ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಅನಾವಶ್ಯಕವಾಗಿ ಇಂತಹ ವಿಷಯದಲ್ಲಿ ಸಂಸದರು,ಶಾಸಕರನ್ನು ಪರೋಕ್ಷವಾಗಿ ಎಂಇಎಸ್‌ನೊಂದಿಗೆ ಕೈಜೋಡಿಸಿ ಬೆಳಗಾವಿ ಜಿಲ್ಲೆಯಲ್ಲಿ ದ್ವೇಷದ ಕಿಡಿ ಹಚ್ಚುತ್ತಿದೆ ಎಂದು ದೂರಿದರು.
ಭಗವಾಧ್ವಜ ಪ್ರಕರಣದಲ್ಲಿ ಎಂಇಎಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಸರ್ಕಾರಕ್ಕೆ ರಾಜ್ಯದ ಬಗ್ಗೆ ಕಾಳಜಿ ಇದ್ದರೆ, ಕನ್ನಡಿಗರ ಬಗ್ಗೆ ಗೌರವವಿದ್ದರೆ ಈ ಕೂಡಲೇ ಅವರನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಅವರು ಆಗ್ರಹಿಸಿದರು. |