ಶ್ರೀರಾಮ ಸೇನೆಯನ್ನು ಗೋವಾದಲ್ಲಿ ನಿಷೇಧಿಸಲಾಗುವುದು ಎಂಬ ಗೋವಾ ಗೃಹ ಸಚಿವ ರವಿ ನಾಯಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮುತಾಲಿಕ್, ಗೋವಾದಲ್ಲಿ ಬೃಹತ್ ಹಿಂದೂ ಸಮಾವೇಶ ಮಾಡಲು ಸದದಲ್ಲೇ ಗೋವಾಕ್ಕೆ ತೆರಳುತ್ತೇನೆ. ತಾಕತ್ತಿದ್ದರೆ ಅವರು ತಡೆಯಲಿ. ಅಲ್ಲದೇ ಅಲ್ಲಿ ಪಬ್ ಸಂಸ್ಕೃತಿ ವಿರುದ್ಧ ಹೋರಾಟ ಕಟ್ಟುತ್ತೇನೆ ಎಂದು ಸಚಿವರಿಗೆ ಸವಾಲು ಹಾಕಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್‌ಗೆ ನಿಷೇಧ ಹೇರಿದ ಬಿಜೆಪಿ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇರಿದಂತೆ 7 ರಾಜ್ಯಗಳಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ ನಡೆಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಶ್ರೇಷ್ಠ ಹಿಂದು ಚಳವಳಿಗಾರರಾದ ಭಗತ್‌ಸಿಂಗ್, ರಾಜ್‌ಗುರು ಮತ್ತು ಸುಖ್ ದೇವ್ ಅವರನ್ನು ಗಲ್ಲಿಗೇರಿಸಿದ ದಿನವಾದ ಮಾರ್ಚ್ 23 ರಂದು ಪ್ರತಿಭಟನೆ ಆರಂಭವಾಗಲಿದೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ಪ್ರವೇಶ ನಿಷೇಧ ಆದೇಶದ ಹಿಂದೆ ಬಿಜೆಪಿ ಕುಮ್ಮಕ್ಕಿದೆ. ಈ ಮೂಲಕ ಹಿಂದು ಪ್ರತಿಪಾದಕರನ್ನು ದಮನಗೊಳಿಸುವ ಹೊಸದೊಂದು ಸಂಪ್ರದಾಯವನ್ನು ಪಕ್ಷ ಹುಟ್ಟು ಹಾಕಿದೆ. ಇದು ಹಿಂದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ತಕ್ಷಣವೇ ಪ್ರವೇಶ ನಿಷೇಧ ಆದೇಶವನ್ನು ಹಿಂತೆಗೆದುಕೊಂಡು ಕ್ಷಮೆಯಾಚಿಸಬೇಕು. ಹಾಗೆ ಮಾಡದೆ ಇದ್ದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಿಂದುಗಳು ಪಕ್ಷಕ್ಕೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.
ಕಳೆದ ಆರು ವರ್ಷದಿಂದ ದಕ್ಷಿಣ ಕನ್ನಡದಲ್ಲಿ ಭಾಷಣವನ್ನೇ ಮಾಡಿಲ್ಲ. ಸರ್ಕಾರ ಯಾವ ಆಧಾರದ ಮೇಲೆ ಪ್ರವೇಶ ನಿಷೇಧ ಹೇರಿತು? ಇದನ್ನು ನಾನು ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದರು. |