ಚಿತ್ರೀಕರಣಕ್ಕೆ ಅನುಮತಿ ನೀಡುವ ವಿಷಯದಲ್ಲಿ ಉಂಟಾದ ಗೊಂದಲದ ಪರಿಣಾಮ ಪೊಲೀಸರು ಮತ್ತು ಚಿತ್ರತಂಡದ ಮಧ್ಯೆ ವಾಗ್ವಾದ ನಡೆದು ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ಇಲ್ಲಿನ ಎಂ.ಜಿ.ರಸ್ತೆಯಲ್ಲಿ ಬುಧವಾರ ನಡೆದಿದೆ.
ಕಳೆದ ಮೂರು ದಿನಗಳಿಂದ ಇಲ್ಲಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ 'ಇನಿಯಾ' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಾಯಕ ನಟ ಬಾಲಾಜಿ, ನಾಯಕಿ ಪೂಜಾಗಾಂಧಿ ಮತ್ತು ಖಳನಟ ಹರೀಶ್ ರೈ ಒಳಗೊಂಡ ಚಿತ್ರ ತಂಡ ಇದರಲ್ಲಿ ಪಾಲ್ಗೊಂಡಿದೆ.
ಚಿತ್ರೀಕರಣ ನೋಡಲು ಸಹಜವಾಗಿ ಜನಜಂಗುಳಿ ಸೇರುತ್ತಿದ್ದು, ಇದನ್ನು ನಿಯಂತ್ರಿಸುವುದು ಪೊಲೀಸರಿಗೆ ನಿತ್ಯದ ಕಾರ್ಯ. ಬುಧವಾರ ಸಂತೆ ದಿನವಾದ್ದರಿಂದ ಎಂ.ಜಿ.ರಸ್ತೆಯಲ್ಲಿ ವಾಹನ ಮತ್ತು ಜನಸಂದಣಿ ಅಧಿಕವಾಗಿತ್ತು. ಈ ಸಂದರ್ಭದಲ್ಲಿ ಚಿತ್ರೀಕರಣ ಮುಂದುವರಿದಾಗ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಪುಟ್ಟಮಾದಪ್ಪ ಮತ್ತು ವೃತ್ತ ನಿರೀಕ್ಷಕ ಶರೀಫ್ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದೆ.
ಚಿತ್ರೀಕರಣ ನಡೆಸಲು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿರುವುದಾಗಿ ಪೊಲೀಸರಿಗೆ ತಿಳಿಸಿದರೂ ಸಹಕರಿಸಲಿಲ್ಲ ಎನ್ನುವ ಆರೋಪ ನಾಯಕನಟ ಬಾಲಾಜಿಯವರದ್ದು. ಈ ಹಂತದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದ್ದು ಜನದಟ್ಟಣೆ ಹೆಚ್ಚಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ವೇಳೆ ಚಿತ್ರತಂಡದ ಶ್ರೀನಿವಾಸ್ ಎಂಬವರಿಗೆ ಗಾಯವಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚಿತ್ರಮಂಡಳಿಗೆ ದೂರು ನೀಡುವುದಾಗಿ ಚಿತ್ರತಂಡ ತಿಳಿಸಿದೆ. |