ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡಲು ಬಿಜೆಪಿ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂಬುದಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದು, ಅವರ ವಿರುದ್ಧ ರಾಜ್ಯ ಮುಖ್ಯಚುನಾವಣಾ ಅಧಿಕಾರಿಗೆ ದೂರು ನೀಡಿರುವುದಾಗಿ ಮುಖ್ಯಮಂತ್ರಿಗಳ ಸಲಹೆಗಾರ ಕೆ.ದಿವಾಕರ್ ತಿಳಿಸಿದ್ದಾರೆ.
ಬುಧವಾರ ಅವರು ಶಿವಮೊಗ್ಗದಿಂದ ಫ್ಯಾಕ್ಸ್ ಮೂಲಕ ಸಲ್ಲಿಸಿರುವ ದೂರಿನ ವಿವರದಂತೆ, ಮಾರ್ಚ್ 17ರಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕವನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡಲು ಹೊರಟಿದೆ ಎಂದಿದ್ದಾರೆ. ಬೆಳಗಾವಿಯ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಭಗವಾಧ್ವಜ ಹಾರಿಸುವ ಸಂಬಂಧ ಅವರು ಈ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ಭಾಷೆ-ಗಡಿ ವಿವಾದವನ್ನು ಕೆದಕಿ ಇದರ ಆಧಾರದ ಮೇಲೆ ಮತದಾರರನ್ನು ಒಡೆದು ಬೆಂಬಲ ಪಡೆಯುವ ಪ್ರಯತ್ನ ಇದಾಗಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. |