ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸಲು ಯತ್ನಿಸಿ ರಾಜಕೀಯ ಬಿಕ್ಕಟ್ಟಿಗೆ ಕಾರಣರಾಗಿದ್ದ ಸಂಸದ ಸುರೇಶ್ ಅಂಗಡಿ ಹಾಗೂ ಶಾಸಕ ಸಂಜಯ್ ಪಾಟೀಲ್ ಕೊನೆಗೂ ಕನ್ನಡಿಗರ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.
ಭಗವಾಧ್ವಜ ಹಿಂದೂ ರಾಷ್ಟ್ರದ ಸಂಕೇತ, ಆ ಕಾರಣಕ್ಕಾಗಿಯೇ ನಾವು ಎಂಇಎಸ್ ಅನ್ನು ಬೆಂಬಲಿಸಿದ್ದೇವು ಎಂದು ಗುರುವಾರ ಜಂಟಿಯಾಗಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿದರು.
ಕನ್ನಡಿಗರ ಭಾವನೆಗೆ, ಕನ್ನಡ ನಾಡಿಗೆ ದ್ರೋಹ ಬಗೆಯುವ ಯಾವುದೇ ಉದ್ದೇಶದಿಂದ ನಾವು ಎಂಇಎಸ್ ಅನ್ನು ಬೆಂಬಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ ಅಂಗಡಿ, ತಮ್ಮ ಕಾರ್ಯವೈಖರಿ ವಿರುದ್ಧ ಕನ್ನಡಿಗರಿಗೆ ನೋವಾಗಿದ್ದರೆ ಕ್ಷಮೆಯಾಚಿವುದಾಗಿ ಹೇಳಿದರು.
ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಭಗವಾಧ್ವಜ ಹಾರಿಸುವ ಎಂಇಎಸ್ ಕಾರ್ಯಕರ್ತರೊಂದಿಗೆ ಸಂಸದ ಅಂಗಡಿ ಮತ್ತು ಶಾಸಕ ಸಂಜಯ್ ಪಾಟೀಲ್ ಕೈಜೋಡಿಸುವ ಮೂಲಕ ಕನ್ನಡಪರ ಸಂಘಟನೆ ಸೇರಿದಂತೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಕನ್ನಡ ದ್ರೋಹಿ ಸಂಸದ-ಶಾಸಕರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸುವಂತೆ ಕನ್ನಡಪರ ಸಂಘಟನೆ, ಜಯಕರ್ನಾಟಕ ಸಂಘಟನೆ, ವಿದ್ಯಾರ್ಥಿ ಜನತಾದಳ, ವಿದ್ಯಾರ್ಥಿ ಕಾಂಗ್ರೆಸ್ ಪಟ್ಟು ಹಿಡಿದು, ಪ್ರತಿಭಟನೆ ಕೂಡ ನಡೆಸಿದ್ದವು. |