ಉಪಗ್ರಹ ಆಧಾರಿತ ಛಾಯಾಚಿತ್ರ ಆಧರಿಸಿ ಯಾವುದೇ ಒಂದು ಜಮೀನು ಒತ್ತುವರಿ ಆಗಿದೆಯೇ ಇಲ್ಲವೇ ಎಂಬುದರ ಅಧ್ಯಯನ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಈ ಅಧ್ಯಯನಕ್ಕೆ ಆಧಾರ ಏನು ಎಂಬಿತ್ಯಾದಿ ಮಾಹಿತಿಗಳ ಕುರಿತು ವಿವರಣೆ ನೀಡುವಂತೆ ಹೈಕೋರ್ಟ್ ಸರ್ಕಾರ ಸೇರಿದಂತೆ ಲೋಕಾಯುಕ್ತಕ್ಕೆ ಗುರುವಾರ ನೋಟಿಸ್ ಜಾರಿ ಮಾಡಿದೆ.
ಉಪಗ್ರಹದಿಂದ ತೆಗೆದಿರುವ ಛಾಯಾಚಿತ್ರದ ಆಧಾರದ ಮೇಲೆ ಜಮೀನು ಒತ್ತುವರಿಯಾಗಿರುವುದಾಗಿ ಲೋಕಾಯುಕ್ತರು ನೀಡಿರುವ ವರದಿ ಹಾಗೂ ಈ ವರದಿಯ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ ರದ್ದತಿಗೆ ಕೋರಿ ಬಳ್ಳಾರಿಯ ಎಚ್.ಆರ್.ಗವಿಯಪ್ಪ ಹಾಗೂ 50ಕ್ಕೂ ಅಧಿಕ ಮಂದಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್ ಈ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.
ವಿವಾದಕ್ಕೆ ಸಂಬಂಧಿಸಿದಂತೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಸರ್ಕಾರ, ಲೋಕಾಯುಕ್ತ ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.
ಅರ್ಜಿದಾರರು ಬಳ್ಳಾರಿಯ ವಿಠಲನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿನ 34ಹೆಕ್ಟೇರ್ ಪ್ರದೇಶದಲ್ಲಿನ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿದ್ದಾರೆ ಎನ್ನುವುದು ಲೋಕಾಯುಕ್ತರ ಆರೋಪ.
ಈ ಆರೋಪದ ಹಿನ್ನೆಲೆಯಲ್ಲಿ ಅರ್ಜಿದಾರರ ಗಣಿಗಾರಿಕೆಯ ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು ಅವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಆದರೆ ಈ ವರದಿಯನ್ನು ಉಪಗ್ರಹ ಆಧಾರಿತ ಛಾಯಾಚಿತ್ರದ ಮೂಲಕ ತಯಾರು ಮಾಡಿರುವ ಕಾರಣ, ಅದು ಸತ್ಯಕ್ಕೆ ದೂರವಾದ ಮಾತು ಎನ್ನುವುದು ಅರ್ಜಿದಾರರ ಆಕ್ಷೇಪ. |