ಸಿಲಿಕಾನ್ ಸಿಟಿ ಬೆಂಗಳೂರಿಗೆ ಎನ್‌ಎಸ್‌ಜಿ ಕೊಡುವ ಬೇಡಿಕೆಯನ್ನು ತಿರಸ್ಕರಿಸಿರುವ ಗೃಹಸಚಿವ ಚಿದಂಬರಂ, ಕರ್ನಾಟಕಕ್ಕೆ ಭಯೋತ್ಪಾದನಾ ನಿಗ್ರಹ ಪಡೆ ರಚನೆಗೆ ಅಭಯ ನೀಡಿದ್ದಾರೆ.
ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ರಾಜ್ಯಕ್ಕೆ ಆಗಮಿಸಿದ ಚಿದಂಬರಂ ಅವರು ರಾಜ್ಯ ಗೃಹ ಸಚಿವ ವಿ.ಎಸ್.ಆಚಾರ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಭದ್ರತೆಯ ಕುರಿತು ಚರ್ಚೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ನಾಲ್ಕು ರಾಜ್ಯಗಳಿಗೆ ಎನ್‌ಎಸ್‌ಜಿ ಪಡೆ ರಚಿಸಲಾಗುವುದು. ಉಳಿದ ರಾಜ್ಯಗಳಲ್ಲಿ ವಿಶೇಷ ಭದ್ರತಾ ಪಡೆ ರಚನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ರಾಜ್ಯದ ವಿಶೇಷ ಭದ್ರತಾ ಪಡೆಗೆ ಹೆಚ್ಚಿನ ಬಲ ನೀಡುವುದಾಗಿ ಭರವಸೆ ನೀಡಿದ ಅವರು, ಭದ್ರತೆಯ ಕುರಿತು ರಾಜ್ಯ ಸರ್ಕಾರದೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ಚಿದಂಬರಂ ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯಕ್ಕೆ ಎನ್‌ಎಸ್‌ಜಿ ಪಡೆ ನೀಡಬೇಕೆಂಬ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಭಯೋತ್ಪಾದನಾ ನಿಗ್ರಹ ಪಡೆ ನೀಡುವುದಾಗಿ ಈ ಸಂದರ್ಭದಲ್ಲಿ ನುಡಿದರು. |