ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದ ರಾಜಧಾನಿಯ ಮೇಲೆ ಭಯೋತ್ಪಾದಕರ ಕರಿ ನೆರಳು ಆವರಿಸಿರುವ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಬೆಂಗಳೂರಿನ ಮೇಲೆ ಉಗ್ರಗಾಮಿಗಳ ಕರಿನೆರಳು ದಟ್ಟವಾಗಿದ್ದು, ವಿಧಾನಸೌಧ, ಹೈಕೋರ್ಟ್ ಮತ್ತು ಪ್ರಮುಖ ಎರಡು ಆಸ್ಪತ್ರೆಗಳು ಉಗ್ರರ ಹಿಟ್ ಲಿಸ್ಟ್‌ನಲ್ಲಿವೆ ಎಂಬ ಆಘಾತಕಾರಿ ಅಂಶವನ್ನು ಕೇಂದ್ರೀಯ ಗುಪ್ತಚರ ದಳ ರಾಜ್ಯ ಸರ್ಕಾರಕ್ಕೆ ರವಾನಿಸಿದೆ.
ಶುಕ್ರವಾರ ಸಚಿವ ಆಚಾರ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ದಾಳಿ ಸಾಧ್ಯತೆ ಕುರಿತು ಕೇಂದ್ರ ಗುಪ್ತಚರ ಪಡೆಯಿಂದ ರಾಜ್ಯಕ್ಕೆ ಎಚ್ಚರಿಕೆ ಬಂದಿದೆ ಎಂದರು. ತೀರ ಇತ್ತೀಚೆಗೆ ಮಾ.13ರಂದು ವಿಧಾನಸೌಧ, ಹೈಕೋರ್ಟ್ ಹಾಗೂ ಪ್ರಮುಖ ಆಸ್ಪತ್ರೆಗಳ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಬಂದಿತ್ತು. ದಾಳಿಯನ್ನು ಎದುರಿಸಲು ರಾಜ್ಯ ಪೊಲೀಸ್ ಪಡೆ ಸರ್ವ ಸನ್ನದ್ಧ ಸ್ಥಿತಿಯಲ್ಲಿದೆ ಎಂದು ಹೇಳಿದರು.
ನಗರದ ಮೇಲೆ ಉಗ್ರರ ದಾಳಿಯ ಭೀತಿ ಅವ್ಯಾಹತವಾಗಿದ್ದು, ಕೇಂದ್ರ ಗುಪ್ತಚರ ಪಡೆಯು ಆಗಾಗ ಇಂತಹ ಎಚ್ಚರಿಕೆ ನೀಡುತ್ತಿದೆ. ಬೆಂಗಳೂರಿನ ಕೆಲವು ವ್ಯಕ್ತಿಗಳು ಹಾಗೂ ಪ್ರಮುಖ ಸ್ಥಾವರಗಳನ್ನು ಗುರಿಯಾಗಿರಿಸಿ ಭಯೋತ್ಪಾದಕರ ದಾಳಿ ನಡೆಯುವ ಸಾಧ್ಯತೆಯಿದ್ದು, ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಸಿದ್ದತೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ. |