ವೃತ್ತಿ ಶಿಕ್ಷಣ ಕೋರ್ಸ್ ಗಳಾದ ದಂತ ವೈದ್ಯಕೀಯ, ಆಯುಷ್ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ರದ್ದುಪಡಿಸಿ ಹೊರಡಿಸಿದ್ದ ಆದೇಶವನ್ನು ಸರಕಾರ ವಾಪಸ್ ಪಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರಗೌಡ ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ಸರ್ಕಾರ ಸಿಇಟಿಯನ್ನು ರದ್ದುಗೊಳಿಸಿತ್ತು. ವೃತ್ತಿಶಿಕ್ಷಣ ಕೋರ್ಸ್ ಗಳಿಗೆ ಹಿಂದಿನ ವರ್ಷ ಜಾರಿಯಲ್ಲಿದ್ದಂತೆ ಈ ವರ್ಷವೂ (2009-10) ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡದಿರಲಿ ಎಂಬ ಕಾರಣಕ್ಕೆ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಿಇಟಿ ರದ್ದುಪಡಿಸಿ ಸರಕಾರ ಮಾ.5ರಂದು ಆದೇಶ ಹೊರಡಿಸಿತ್ತು. ಆದೇಶಕ್ಕೆ ಪೂರಕವಾಗಿ ಸರಕಾರಿ ಸೀಟುಗಳಿಗೆ ಪ್ರವೇಶ ನೀಡುವ ಸಂಬಂಧ ರಚನೆಯಾಗಿರುವ ವೃತ್ತಿ ಶಿಕ್ಷಣ ಕಾಯಿದೆ 2006ಕ್ಕೆ ತಿದ್ದುಪಡಿ ತರಲು ಉದ್ದೇಶಿಸಲಾಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ್ದರಿಂದ ತಿದ್ದುಪಡಿ ಸಾಧ್ಯವಾಗಲಿಲ್ಲ. ಹಾಗಾಗಿ ಆದೇಶ ವಾಪಸ್ ಪಡೆಯಲಾಗಿದೆ . ಮುಂದಿನ ವರ್ಷ ಸಿಇಟಿ ರದ್ದಾಗಲಿದೆ. ಒಂದೆರಡು ದಿನಗಳಲ್ಲಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುತ್ತದೆ ಎಂದು ಸಚಿವರು ಹೇಳಿದರು. |