ಬಂಗಾರಪ್ಪ ಅವರ ಆಸ್ತಿ ದಾಖಲೆಯ ಕಡತ ಪರಿಶೀಲಿಸುವ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕುಟುಂಬದಲ್ಲೇ ನಡೆದ ಘಟನೆಯೊಂದರ ತನಿಖೆಯನ್ನು ಮೊದಲು ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಕಾಂಗ್ರೆಸ್, ಬಿಎಸ್ಪಿ ಪಕ್ಷಗಳ ಮುಖಂಡರು ಕಾರ್ಯಕರ್ತರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗಾರಪ್ಪ ಅವರ ಆಸ್ತಿಯ ಕಡತ ಪರಿಶೀಲಿಸುವ ಮುಖ್ಯಮಂತ್ರಿಗಳು ಮುಂದಾಗಿರುವುದು ರಾಜಕೀಯ ಲಾಭಕ್ಕೆ ಎಂದು ಟೀಕಿಸಿದರು.
ರಾಜ್ಯದ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಮುಖ್ಯಮಂತ್ರಿಗಳು ಆಪರೇಶ್ ಕಮಲದ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಚುನಾವಣೆ ಘೋಷಣೆಯಾದ ನಂತರ ಪ್ರತಿದಿನ ಒಂದೆರಡು ಗಂಟೆ ಶಿವಮೊಗ್ಗದಲ್ಲೇ ಕಳೆಯುತ್ತಿರುವ ಯಡಿಯೂರಪ್ಪ ಅವರು ವಾಮಮಾರ್ಗಗಳ ಮೂಲಕ ಮಗನನ್ನು ಗೆಲ್ಲಿಸುವ ಯತ್ನ ಮಾಡಿದ್ದಾರೆ ಎಂದು ದೂರಿದರು. ಬೇರೆ ಪಕ್ಷಗಳ ಅತೃಪ್ತರನ್ನು ನಾವು ಸೆಳೆಯುತ್ತಿಲ್ಲ ಜನತಾ ಪರಿವಾರ ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಕರೆ ತರುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. |