ಭಾರೀ ಮೊತ್ತದ ಹಣ, ಒಡವೆ ತರುವಾಗ ದರೋಡೆಕೋರರು ಅಡ್ಡ ಹಾಕಿದರೆ ಹಿಂದೆ-ಮುಂದೆ ನೋಡಬೇಡಿ, ಕೈಯಲ್ಲಿ ಬಂದೂಕು ಅಥವಾ ಪಿಸ್ತೂಲ್ ಇದ್ದರೆ ಗುಂಡು ಹಾರಿಸಿ ಬಿಡಿ! ಹಾಗಂತ ನಗರ ಪೊಲೀಸ್ ಆಯುಕ್ತ ಶಂಕರಿ ಬಿದರಿ ಸಲಹೆ ನೀಡಿದ್ದಾರೆ.
ಆದರೆ ಎಚ್ಚರ, ಸುಖಾಸುಮ್ಮನೆ ಗುಂಡು ಹಾರಿಸಿದರೆ ನಿಮಗೆ ಜೈಲುಕಂಬಿ ಖಂಡಿತ. ಪ್ರಾಣ ರಕ್ಷಣೆಗೆ ಅನಿವಾರ್ಯವೆಂದಾಗ ಮಾತ್ರ ಇಂಥದ್ದೊಂದು ಕ್ರಮ ಅನುಸರಿಸಿ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಬ್ಯಾಂಕ್‌ನಿಂದ ತರುವ ಹಣ, ಕಾರ್ಖಾನೆ, ಸಂಸ್ಥೆಗಳಿಗೆ ವೇತನ ನೀಡಲು ಸಾಗಿಸುವ ಹಣ, ಆಭರಣಗಳನ್ನು ದರೋಡೆ ಮಾಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಇಂಥದ್ದೊಂದು ಪರಿಹಾರ ಮಾರ್ಗವನ್ನು ಅನುಸರಿಸುತ್ತಿರುವುದಾಗಿ ಬಿದರಿ ಹೇಳಿದರು.
ಸ್ವಯಂ ರಕ್ಷಣೆ ಸಂದರ್ಭ ಬಂದಾಗ ನಿಮ್ಮ ಬಳಿ ಪರವಾನಿಗೆ ಪಡೆದ ಆಯುಧಗಳಿದ್ದರೆ ಬಳಸಬಹುದು. ಖಾಸಗಿ ಭದ್ರತಾ ತಂಡವನ್ನು ಇಟ್ಟುಕೊಂಡಿದ್ದರೂ ಅದನ್ನು ಬಳಸಿಕೊಳ್ಳಿ, ಪೊಲೀಸರು ನಿಮ್ಮ ನೆರವಿಗಿದ್ದಾರೆ ಎಂದು ಅಭಯ ನೀಡಿದ್ದಾರೆ. |