ಸಿಸಿಬಿ ಪೊಲೀಸರು ಅಂತಾರಾಜ್ಯ ಕಳ್ಳರು ಹಾಗೂ ಕೊಲೆ ಮತ್ತು ದರೋಡೆ ಆರೋಪಿಗಳನ್ನು ಬಂಧಿಸಿ 38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಏಳು ಮಂದಿ ಅಂತಾರಾಜ್ಯ ಕಳ್ಳರಿಂದ 28 ಲಕ್ಷ ರೂ.ಬೆಲೆ ಬಾಳುವ ಆಭರಣ ಹಾಗೂ ಕೊಲೆ ಮತ್ತು ದರೋಡೆ ಮಾಡಿದ ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಹೊಸಕೋಟೆಯ ಮುಷೀರ್ಖಾನ್, ರಿಯಾಜ್ ಕುಟ್ಟಿ, ರಿಯಾಜ್ ಪಾಷ, ಫಯಾಜ್, ಇಮ್ರಾನ್, ಖಲೀಲ್ ಹಾಗೂ ವಿವೇಕ್ ನಗರದ ಅಫಾಕ್ಖಾನ್ ಬಂಧಿತ ಆರೋಪಿಗಳು. ಇವರಿಂದ 1600 ಗ್ರಾಂ ಚಿನ್ನ 16 ಕೆ.ಜಿ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ.
ಇವರ ವಿರುದ್ಧ ಬೆಂಗಳೂರು ಸೇರಿದಂತೆ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಅನೇಕ ಕಳವು ಪ್ರಕರಣಗಳು ದಾಖಲಾಗಿದ್ದವು. ಮೂರು ವರ್ಷ ಜೈಲಿನಲ್ಲಿದ್ದ ಇವರು ಬಿಡುಗಡೆ ನಂತರ ಮತ್ತೆ ಅದೇ ದಂಧೆ ಮುಂದುವರಿಸಿದ್ದರು.
ಆರೋಪಿಗಳು ಜೆ.ಪಿ.ನಗರ, ಹೆಣ್ಣೂರು ಹಾಗೂ ತಿರುಪತಿಯಲ್ಲಿ ಕಳವು ನಡೆಸಿದ್ದರು. ಕೆ.ಆರ್.ಪುರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಇತರೆಡೆ ಹಗಲು ದರೋಡೆ ಮಾಡಿದ್ದರು. 2007 ರಲ್ಲಿ ಚನ್ನಪಟ್ಟಣ, ಬ್ಯಾಟರಾಯನಪುರ, ಚಂದ್ರಾಲೇಔಟ್, ಸಿದ್ದಾಪುರಗಳಲ್ಲಿ ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. |