ಪುಟಗೋಸಿ ವಿರೋಧ ಪಕ್ಷ ನಾಯಕ ಸ್ಥಾನಕ್ಕಾಗಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ 9 ತಿಂಗಳ ಕಾಲ ಕಾಂಗ್ರೆಸ್ ಮುಖಂಡರನ್ನು ಬ್ಲಾಕ್ಮೇಲ್ ಮಾಡಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.ದಲಿತ ನಾಯಕರಾಗಿರಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲಾಗಿರುವ ವಿರೋಧ ಪಕ್ಷ ನಾಯಕನ ಸ್ಥಾನವನ್ನು ಕಸಿದುಕೊಳ್ಳಲು 9 ತಿಂಗಳುಗಳ ಕಾಲ ಕಾಂಗ್ರೆಸ್ ಮುಖಂಡರನ್ನು ಬ್ಲಾಕ್ಮೇಲ್ ಮಾಡಿದ್ದಾರೆ ಎಂದು ಟೀಕಿಸಿದರು. " ತೃತೀಯ ರಂಗದ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಸ್ಥಾನದ ಆಸೆಯಿಂದ ತೃತೀಯ ರಂಗ ಕಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಆದರೆ ದೇವೇಗೌಡರಿಗೆ ಅದರ ಅಗತ್ಯವಿಲ್ಲ. ಪುಟಗೋಸಿ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು ಹೆಣಗಾಡುತ್ತಿರುವ ಸಿದ್ದರಾಮಯ್ಯಗೆ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ" ಎಂದರು. ಪಕ್ಷ ಸಂಘಟಿಸಲು ದೇವೇಗೌಡರು ಪಕ್ಷದ ಕಾರ್ಯಕರ್ತರ ಕಾಲು ಹಿಡಿಯುತ್ತಾರೆಯೇ ಹೊರತು ರಾಷ್ಟ್ರೀಯ ಮುಖಂಡರ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂದರು. ಪ್ರಧಾನಿ ಹುದ್ದೆ ಆಸೆ ತನಗೆ ಅಥವಾ ದೇವೇಗೌಡರಿಗೆ ಇಲ್ಲ ಎಂದ ಕುಮಾರಸ್ವಾಮಿ, ನಾವು ರಾಜ್ಯದ ಉದ್ದಾರಕ್ಕಾಗಿ ಶ್ರಮಿಸುತ್ತೇವೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದರು. |