ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಒಂದು ವರ್ಷ ಮಂಗಳೂರು ಪ್ರವೇಶಿಸದಂತೆ ನಿಷೇಧ ಹೇರಿರುವುದು ಸಂವಿಧಾನ ವಿರೋಧಿ ನೀತಿಯಾಗಿದ್ದು, ಹಿಂದೂ ಶಕ್ತಿಗಳನ್ನು ಹತ್ತಿಕ್ಕುವ ಒಂದು ಪೂರ್ವಯೋಜಿತ ಕೃತ್ಯ ಎಂದು ಶ್ರೀರಾಮ ಸೇನೆಯ ನಗರ ಘಟಕದ ಅಧ್ಯಕ್ಷ ವಸಂತ ಕುಮಾರ್ ಭವಾನಿ ತಿಳಿಸಿದ್ದಾರೆ.
ಅವರು ನಗರದ ಎಂ.ಜಿ.ರಸ್ತೆಯ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ, ಈ ನಿಷೇಧವನ್ನು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದರು.
ಮುತಾಲಿಕ್ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿರುವುದು ಸತ್ಯಕ್ಕೆ ದೂರವಾದ ಮಾತು. 2003 ರಿಂದ ಮುತಾಲಿಕ್ ಅವರು ಮಂಗಳೂರಿನಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿಲ್ಲ. ಮಂಗಳೂರು ಪ್ರವೇಶಿಸದಂತೆ ಹೇರಿರುವ ನಿಷೇಧಕ್ಕೂ, ರಾಣಿಬೆನ್ನೂರಿನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ರಾಣಿಬೆನ್ನೂರಿನ ಮೂರೂ ಪ್ರಕರಣಗಳಲ್ಲೂ ನ್ಯಾಯಾಲಯ ಮುತಾಲಿಕ್ ಅವರಿಗೆ ನಿರ್ದೋಷಿ ಎಂದು ತೀರ್ಪು ನೀಡಿದೆ. ಆದರೂ ಹಿಂದಿನ ಘಟನೆಗಳನ್ನು ಆಧರಿಸಿ ನಿಷೇಧ ಹೇರಿರುವುದರ ಹಿಂದೆ ರಾಜಕೀಯ ಲಾಭವಿರುವುದು ಕಂಡು ಬರುತ್ತಿದೆ ಎಂದರು.
ಶ್ರೀರಾಮಸೇನೆ ಹಿಂದೂ ಸಂಸ್ಕೃತಿ, ಧರ್ಮದ ರಕ್ಷಕನಂತೆ ಕೆಲಸ ಮಾಡುತ್ತಿದೆ. ಸಂಸ್ಕೃತಿಗೆ ಧಕ್ಕೆಯಾದಾಗ ತನ್ನ ಧ್ವನಿ ಎತ್ತಿದೆಯೇ ಹೊರತು ರಾಜಕೀಯ ಲಾಭಕ್ಕಾಗಿಯಾಗಲಿ ಇತರ ಯಾವುದೇ ಉದ್ದೇಶದಿಂದಾಗಲಿ ಜನರ ಮಧ್ಯೆ ಕೋಮು ಗಲಭೆಯನ್ನು ಸೃಷ್ಟಿಸಿಲ್ಲ. ಆದರೆ ಕೆಲವು ದುಷ್ಟಶಕ್ತಿಗಳು ಮಾಡಿದ ಕೃತ್ಯಗಳನ್ನು ಶ್ರೀರಾಮಸೇನೆಯ ಮೇಲೆ ಹೊರಿಸಲಾಗಿದೆ ಎಂದು ಕಿಡಿಕಾರಿದರು.
ಇಲ್ಲಿಯವರೆಗೆ ಮಂಗಳೂರಿನಲ್ಲಿ 6 ಹಿಂದೂ ನಾಯಕರುಗಳ ಹತ್ಯೆಯಾಗಿದ್ದು, 3 ಹಿಂದೂ ನಾಯಕರುಗಳ ಮೇಲೆ ಹಲ್ಲೆ ನಡೆದಿದೆ. ಆರೋಪಿಗಳು ರಾಜಾರೋಷವಾಗಿ ತಿರುಗುತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ನಿರ್ದೋಷಿಯಾದ ಮುತಾಲಿಕ್ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ದುರದೃಷ್ಟಕರ ಅಂಶ ಎಂದರು.
ಮಂಗಳೂರಿನಲ್ಲಿ ಯಾವುದೇ ಗಲಭೆ ಸಂಭವಿಸಿದರೂ ಅದರ ಹೊಣೆಯನ್ನು ಶ್ರೀರಾಮ ಸೇನೆಯ ಮೇಲೆ ಹೊರಿಸಲಾಗುತ್ತದೆ. ಆದರೆ ಮಂಗಳೂರಿನಲ್ಲಿ ತಲೆ ಎತ್ತಿರುವ ಕೆಎಫ್‌ಡಿ ಮತ್ತು ಪಿಎಫ್ಐನಂತಹ ಮುಸ್ಲಿಂ ಸಂಘಟನೆಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ ಎಂದು ಪ್ರಶ್ನಿಸಿದರು.
|