ಸಂಸದೆ ತೇಜಸ್ವಿನಿ ಗೌಡ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಡುವಿನ ಜಟಾಪಟಿ ಮತ್ತೆ ಮುಂದುವರಿದಿದ್ದು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಇಬ್ಬರು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ತನಗೆ ಆದೇಶ ನೀಡಿದ ಎಂದು ತೇಜಸ್ವಿನಿ ಹೇಳುತ್ತಿದ್ದರೆ, ತಾನು ಕೂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವುದಾಗಿ ಡಿಕೆಶಿ ಹೇಳುವ ಮೂಲಕ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ.ಹೈಕಮಾಂಡ್ ಆದೇಶವನ್ನು ಡಿ.ಕೆ.ಶಿವಕುಮಾರ್ ತಿರುಚುವ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ತೇಜಸ್ವಿ ಗಂಭೀರವಾಗಿ ಆರೋಪಿಸಿದ್ದಾರೆ. ಶಿವಕುಮಾರ್ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ಹಿರಿಯ ಮುಖಂಡ ಜಾಫರ್ ಷರೀಫ್ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ. ನಾನು ಅವರೊಂದಿಗೂ ಮಾತನಾಡಿದ್ದೇನೆ. ನನಗೆ ಷರೀಫ್ ಅವರ ಬೆಂಬಲವೂ ಇದೆ. ಗ್ರಾಮಾಂತರ ಕ್ಷೇತ್ರದಲ್ಲಿ ಗೆಲುವ ವಿಶ್ವಾಸ ತಮಗೆ ಇರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.ಬಿಜೆಪಿ ನಡೆಸುತ್ತಿರುವ ಆಪರೇಶನ್ ಕಮಲದ ಹಿಂದೆ ಡಿಕೆಶಿ ಅವರ ನೇರ ಕೈವಾಡ ಇದೆ ಎಂಬ ಹೇಳಿಕೆ ಮೂಲಕ ತೇಜಸ್ವಿನಿ ವಿವಾದ ಹುಟ್ಟುಹಾಕಿದ್ದರು. ಬಳಿಕ ಪಕ್ಷದ ವರಿಷ್ಠರ ಕೆಂಗಣ್ಣಿಗೂ ಗುರಿಯಾಗಿದ್ದರು. ಅಲ್ಲದೇ ತೇಜಸ್ವಿನಿ ಹಾಗೂ ಅಂಬರೀಶ್ ಪಕ್ಷದ ಪ್ರಶ್ನಾತೀತ ನಾಯಕರು ಎಂಬುದಾಗಿಯೂ ಲೇವಡಿ ಮಾಡಿದ್ದರು. |