ತ್ಯಾಗ ಮತ್ತು ಸೇವಾ ಮನೋಭಾವಕ್ಕೆ ಜಗತ್ತಿನಲ್ಲಿಯೇ ಹೆಸರಾಗಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪಕ್ಷದ ಪ್ರಚಾರಾಂದೋಲನಕ್ಕೆ ಚಾಲನೆ ನೀಡಲಿರುವುದು ಸಾಕಷ್ಟು ಪರಿಣಾಮ ಬೀರಿ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ತಂದು ಕೊಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಈ ರಾಲಿಗೆ ಚಾಲನೆ ನೀಡುವ ಮೂಲಕ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ನಾಂದಿ ಹಾಡಲಿದ್ದಾರೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ ಎಂದರು.
ಪ್ರಧಾನ ಮಂತ್ರಿ ಹುದ್ದೆ ತಮಗೆ ಒಲಿದು ಬಂದರೂ ಅದನ್ನು ಸ್ವೀಕರಿಸದ ಸೋನಿಯಾ ಗಾಂಧಿ ಅವರು ಡಾ.ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಕೂರಿಸಿ ಇಡೀ ವಿಶ್ವವೇ ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಮೂಡುವಂತೆ ಮಾಡಿದ ಮಹಾನ್ ಮಹಿಳೆ ಅವರು. ವಿಶ್ವದಲ್ಲಿಯೇ ಹೊಸ ಇತಿಹಾಸ ನಿರ್ಮಿಸಿರುವ ಅವರು ಕಾಂಗ್ರೆಸ್ ಪಕ್ಷವನ್ನು ಪುನಃ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ದಾವಣಗೆರೆ ಸಮಾವೇಶಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ರಾಜ್ಯದ ಇತಿಹಾಸದಲ್ಲಿಯೇ ಹಿಂದೆಂದೂ ಹಾಕದ ಬೃಹತ್ ಶಾಮಿಯಾನದ ಪೆಂಡಾಲ್ ಹಾಕಲಾಗಿದೆ. ದಶ ದಿಕ್ಕುಗಳಿಂದಲೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಅಭಿಮಾನಿಗಳು ಬರುತ್ತಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶ ಎಂದು ಅವರು ಹೇಳಿದರು.
|