ವಾಜಪೇಯಿ ಮತ್ತು ಯಡಿಯೂರಪ್ಪ ನೇತೃತ್ವದ ಸರಕಾರಗಳ ಸಾಧನೆಗಳು ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿಯವರು ನೀಡಿದ ಗ್ರಾಮೀಣ ರಸ್ತೆ, ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟ, ಚತುಷ್ಪಥ ರಸ್ತೆ, ಗಂಗಾ ಕಾವೇರಿ ಇನ್ನು ಹಲವಾರು ಸಾಧನೆಗಳು ಮತ್ತು ಯಡಿಯೂರಪ್ಪ ನೀಡಿದ ವೃದ್ದಾಪ್ಯ, ಅಂಗವಿಕಲರ ವೇತನ, ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಗೂ 60 ವರ್ಷ ಆಳಿದ ಯುಪಿಎ ಸರ್ಕಾರದ ಶೂನ್ಯ ಕಾರ್ಯಕ್ರಮಗಳನ್ನಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದರು.
ಬೆಲೆ ಏರಿಕೆಯಿಂದ ಬಡ ಜನರು ತತ್ತರಿಸಿದ್ದಾರೆ. ಆದರೆ ಯುಪಿಎ ಸರ್ಕಾರ ಬೆಲೆ ಏರಿಕೆ ತಡೆಗಟ್ಟಲು ವಿಫಲವಾಗಿದೆ ಎಂದು ಆರೋಪಿಸಿದರು. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಶಿವರಾಮೇಗೌಡ ಗೆಲುವಿನೊಂದಿಗೆ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಬಿಜೆಪಿ 22ರಿಂದ 23 ಸ್ಥಾನ ಗೆಲುವುದು ಖಚಿತ ಎಂದರು. |