ಕಾಂಗ್ರೆಸ್ ಶಾಸಕ ವಿ.ಸೋಮಣ್ಣ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮಣ್ಣ ಬಿಜೆಪಿ ಸೇರುವ ಬಗ್ಗೆ ಹಲವು ತಿಂಗಳುಗಳಿಂದ ಗಾಳಿ ಸುದ್ದಿಗಳು ಕೇಳಿ ಬರುತ್ತಿದ್ದವು. ಆದರೆ ಈಗ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.
ಸೋಮಣ್ಣ ಅವರು ಬಿಜೆಪಿ ಸೇರ್ಪಡೆಯಿಂದ ಲೋಕಸಭೆ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಹಿಂದೆ ತಮಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಬಿಜೆಪಿ ಸೇರುವುದಾಗಿ ಸೋಮಣ್ಣ ಷರತ್ತು ಹಾಕಿದ್ದರು. ಆದರೆ ಸಂಪುಟ ದರ್ಜೆ ಸ್ಥಾನಮಾನದ ಬಿಡಿಎ ಅಧ್ಯಕ್ಷ ಹುದ್ದೆ ನೀಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ಇದಕ್ಕೆ ಅವರು ಒಪ್ಪಲಿಲ್ಲ. ಆದರೆ ಈಗ ಸಚಿವ ಸ್ಥಾನ ನೀಡಲು ಬಿಜೆಪಿ ಒಪ್ಪಿದೆ ಎಂದು ಮೂಲಗಳು ಹೇಳಿವೆ.
ಇದರಿಂದಾಗಿ ಯಡಿಯೂರಪ್ಪ ಸಂಪುಟದಲ್ಲಿ ಯಾರಾದರೂ ಒಬ್ಬರು ಸಚಿವರ ತಲೆ ದಂಡವಾಗುವುದಂತೂ ಖಚಿತ. ತಮ್ಮ 15-20 ಬೆಂಬಲಿಗರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಎಂಬ ಬೇಡಿಕೆಯನ್ನು ಸೋಮಣ್ಣ ಇಟ್ಟಿದ್ದಾರೆ ಎನ್ನಲಾಗಿದೆ. |