ಹುಬ್ಬಳ್ಳಿ: ಸಂಸದ ಸುರೇಶ್ ಅಂಗಡಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಬಾರದೆಂದು ಆಗ್ರಹಿಸಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರವೇ ಕಾರ್ಯಕರ್ತರು ಘೇರಾವ್ ಹಾಕಿರುವ ಘಟನೆ ನಡೆಯಿತು.
ಹುಬ್ಬಳ್ಳಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘೇರಾವ್ ಹಾಕಲು ಯತ್ನಿಸಿದಾಗ ಪೊಲೀಸರು ತಡೆದಿದ್ದರು. ಕನ್ನಡ ದ್ರೋಹಿ ಸಂಸದ ಸುರೇಶ್ ಅಂಗಡಿಗೆ ಟಿಕೆಟ್ ನೀಡಬಾರದೆಂದು ಒತ್ತಾಯಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಯಾವುದೇ ಕಾರಣಕ್ಕೂ ಲೋಕಸಭೆಗೆ ಸ್ಪರ್ಧಿಸಲು ಅಂಗಡಿಗೆ ಟಿಕೆಟ್ ನೀಡಬಾರದು, ಟಿಕೆಟ್ ನೀಡಿದ್ದೇ ಹೌದಾದಲ್ಲಿ ಬಿಜೆಪಿ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿಗಳಿಗೆ ಘೇರಾವ್ ಹಾಕಲು ಯತ್ನಿಸಿದ ಕರವೇಯ ಸುಮಾರು 35ಮಂದಿ ಕಾರ್ಯಕರ್ತರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. |